“ನಮ್ಮ ವೆಂಕಟೇಶಾಯ ನಮಃ ಚಿತ್ರಕ್ಕೆ ಸ್ಪೂರ್ತಿಯೇ ನಾನು ಹಿಂದೆ ಅದು ಗೋವಿಂದಾಯ ನಮಃ ಚಿತ್ರ ಎನ್ನಬಹುದು. ಹಾಗಾಗಿಯೇ ಮತ್ತೆ ಪ್ಯಾರ್ ಗೆ ಆಗ್ಬಿಟ್ಟೈತೆ ಅನ್ನೋ ಅಡಿಬರ ಕೂಡ ಬಳಸಿಕೊಂಡಿದ್ದೇವೆ. ಆ ಟ್ಯೂನ್ ಕೂಡ ಮತ್ತೆ ಬಳಸಿಕೊಳ್ಳುವ ಉದ್ದೇಶವಿದೆ. ಅದರ ಪ್ರಯತ್ನ ಕೂಡ ನಡೆಯುತ್ತಿದೆ. ಇದೊಂದು ಲವ್ ಸ್ಟೋರಿ ಚಿತ್ರವಾಗಿದ್ದು , ಹುಡುಗಿ ಕೈ ಕೊಟ್ಟಾಗ ಲೈಫ್ ನ ಚಾಲೆಂಜ್ ಆಗಿ ತಗೊಂಡು
ಲವ್ ಮಾಡದೆ, ಹುಡುಗೀರ ಜೊತೆ ಚೆಲ್ಲಾಟವಾಡುತ್ತಾ , ಎಂಜಾಯ್ ಮಾಡಬೇಕೆಂಬ ವೆಂಕಿ ಅಲಿಯಾಸ್ ವೆಂಕಟೇಶನ ಸುತ್ತ ನಡೆಯುವ ಕಥೆಯನ್ನು ಹಾಸ್ಯ ಮಿಶ್ರಣದೊಂದಿಗೆ ಸಂಪೂರ್ಣ ಪ್ಯಾಕೇಜ್ ಮನರಂಜನೆಯ ಚಿತ್ರವಾಗಿ ನೀಡಲು ಮುಂದಾಗಿದ್ದೇನೆ” ಎಂದು ತಿಳಿಸಿದ್ದು ನಟ-ನಿರ್ದೇಶಕ-ನಿರ್ಮಾಪಕ ಹರೀಶ್ ರಾಜ್.
ಹರೀಶ್ ರಾಜ್ ಸಾರಥ್ಯದ ‘ವೆಂಕಟೇಶಾಯ ನಮಃ’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಕುರಿತು ಮಾಹಿತಿ ನೀಡಲು ಇಡೀ ಚಿತ್ರತಂಡ ಹಾಜರಿದ್ದು, ಚಿತ್ರದ ಟೀಸರ್ ಪ್ರದರ್ಶಿಸಲಾಯಿತು.
“ಇದರಲ್ಲಿ ನಾನೊಬ್ಬ ಸಾಫ್ಟ್ವೇರ್ ಉದ್ಯೋಗಿ ಪಾತ್ರವನ್ನು ನಿರ್ವಹಿಸಿದ್ದೇನೆ. ನನ್ನ ತಾಯಿಯ ಪಾತ್ರದಲ್ಲಿ ಹಿರಿಯ ನಟಿ ಉಮಾಶ್ರೀ ರವರು ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಎಂಟು ಜನ ಹೀರೋಯಿನ್ ಗಳು ಅಭಿನಯಿಸುತ್ತಿದ್ದು , ಇಬ್ಬರು ನಾಯಕಿಯರು ಪ್ರಮುಖವಾಗಿ ಕಾಣುತ್ತಾರೆ. ದೊಡ್ಡ ತಾರಾ ಬಳಗವೇ ಹೊಂದಿರುವ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುವುದರ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನ ವಹಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿಯನ್ನ ನೀಡುತ್ತೇನೆ ನಿಮ್ಮ ಬೆಂಬಲ ನಮಗಿರಲಿ” ಎಂದು ಕೇಳಿಕೊಂಡರು ಹರೀಶ್ ರಾಜ್.
ನಿರ್ಮಾಪಕ ಪಿ. ಜನಾರ್ಧನ್ “ನಿರ್ದೇಶಕರು ಈ ಕಾಮಿಡಿ ಸಬ್ಜೆಕ್ಟ್ ಹೇಳಿದ್ರು, ನಮಗೆ ಬಹಳ ಇಷ್ಟವಾಗಿ ಚಿತ್ರವನ್ನ ಆರಂಭಿಸಿದ್ದೇವೆ , ಮೊದಲ ಹಂತ ಚಿತ್ರೀಕರಣ ಮುಗಿದಿದೆ.
ನಮಗೆ ಎಲ್ಲರೂ ಸಪೋರ್ಟ್ ಮಾಡಿ” ಎಂದು ಕೇಳಿಕೊಂಡರು .
ಹಿರಿಯ ನಟ ಅಶೋಕ್ “ನಟ ನಿರ್ದೇಶಕ ಹರೀಶ್ ರಾಜ್ ನನಗೆ ದಂಡಪಿಂಡಗಳು ಧಾರಾವಾಹಿಯ ಮೂಲಕ ಪರಿಚಯ. ನಟನೆ ಹಾಗೂ ನಿರ್ದೇಶನ ಜವಾಬ್ದಾರಿಯನ್ನು ಒಟ್ಟೊಟ್ಟಿಗೆ ಹೇಗೆ ನಿಭಾಯಿಸುತ್ತಾರೆ ಎಂಬುದೇ ನನಗೆ ಆಶ್ಚರ್ಯ. ನನ್ನ 50ವರ್ಷದ ಈ ಸಿನಿಮಾ ಜರ್ನಿಯಲ್ಲಿ ಇಂದಿಗೂ ನಿರ್ದೇಶನ ಮಾಡುವುದಕ್ಕೆ ಭಯ ಪಡುತ್ತೇನೆ. ಈಗಿನ ಸಿನಿಮಾ ಟ್ರೆಂಡೇ ಬದಲಾಗಿದೆ , ವರ್ಷಕ್ಕೆ 200 ಚಿತ್ರಗಳು ಬಂದರೆ ಬೆರಳೆಣಿಕೆಯ ಚಿತ್ರಗಳು ಮಾತ್ರ ಸಕ್ಸಸ್ ಕಾಣುತ್ತಿದೆ. ನಾನು ಈ ಚಿತ್ರದಲ್ಲಿ ನಾಯಕಿಯ ತಂದೆಯ ಪಾತ್ರವನ್ನು ಮಾಡುತ್ತಿದ್ದೇನೆ , ಕಾಮಿಡಿ ಸಬ್ಜೆಕ್ಟ್ ಜೊತೆ ಮನರಂಜನೆ ಕೂಡ ಸಿಗುತ್ತೆ , ಎಲ್ಲರೂ ನಮ್ಮ ತಂಡಕ್ಕೆ ಸಹಕಾರ, ಬೆಂಬಲ ನೀಡಿ” ಎಂದರು.
ಹಿರಿಯ ನಟ ಉಮೇಶಣ್ಣ “ಹಿರಿಯ ಕಲಾವಿದರನ್ನ ಗುರುತಿಸಿ ಅವಕಾಶ ನೀಡುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತದೆ. ನನ್ನದು ಈ ಚಿತ್ರದಲ್ಲಿ ಹುಡುಗಿ ತೋರಿಸುವ ಬ್ರೋಕರ್ ಪಾತ್ರ. ನಿರ್ದೇಶಕರಿಗೆ ನನ್ನ ಎಕ್ಸ್ಪ್ರೆಶನ್ ಮೇಲೆ ನಂಬಿಕೆ ಜಾಸ್ತಿ, ಹಾಗಾಗಿ ಈ ಪಾತ್ರ ಸಿಕ್ಕಿದೆ” ಎನ್ನುತ್ತಾ ಒಂದಷ್ಟು ಅನುಭವಗಳನ್ನು ಹಂಚಿಕೊಂಡರು.
ಮತ್ತೊಬ್ಬ ಹಾಸ್ಯ ನಟ ತಬಲಾ ನಾಣಿ “ನಿರ್ದೇಶಕರು ಮೊದಲು ನನ್ನ ಜೊತೆ ಈ ಕಥೆಯ ಡಿಸ್ಕಶನ್ ಮಾಡಿದ್ರು, ಇದು ಪ್ರಸ್ತುತ ಕಾಲಘಟ್ಟಕ್ಕೆ ಸೂಕ್ತ ಎಂದಿದ್ದೆ.
ನನ್ನದು ಚಿತ್ರ ನಿರ್ದೇಶಕನ ಪಾತ್ರ , ಮೊದಲು ಸಣ್ಣ ಪಾತ್ರ ಬೇಡ ಎಂದಿದೆ. ನಂತರ ಪಾತ್ರದ ತೂಕ ಇಷ್ಟವಾಯಿತು. ಇನ್ನು ಚಿತ್ರೀಕರಣದ ಸ್ಥಳದಲ್ಲಿ ನಡೆದ ಇಂಪ್ರೊವೈಸೇಶನ್ ಬಹಳ ಸೊಗಸಾಗಿ ಸಾಗುತ್ತಿದೆ” ಎಂದರು.
ಇನ್ನು ಚಿತ್ರದಲ್ಲಿ ನಾಯಕಿಯರಾಗಿ ಪ್ರಕೃತಿ , ಆರಾಧನಾ , ನಾಯಕಿಯ ತಾಯಿಯಾಗಿ ಚಿತ್ಕಲ ಬಿರಾದರ್ , ರಾಘು ರಾಮನ ಕೊಪ್ಪ , ರೇಣುಕಾ ಸೇರಿದಂತೆ ಚಿತ್ರತಂಡದವರು ತಮ್ಮ ಪಾತ್ರದ ಕುರಿತು ಮಾಹಿತಿಯನ್ನು ಹಂಚಿಕೊಂಡರು.
ಶ್ರೀಲಕ್ಷ್ಮಿ ಜನಾರ್ದನ ಮೂವೀಸ್ ಮೂಲಕ ನಿರ್ಮಾಣವಾಗುತ್ತಿರುವ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಈ ಚಿತ್ರಕ್ಕೆ ಶಿವಶಂಕರ್ ಛಾಯಾಗ್ರಾಹಣ ,
ಪ್ರವೀಣ್ ಶ್ರೀನಿವಾಸ್ ಮೂರ್ತಿ ಸಂಗೀತ , ಪ್ರಮೋದ್ ಮರುವಂತೆ , ಚೇತನ್ ಕುಮಾರ್ ಸಾಹಿತ್ಯ , ಜೀವನ್ ಪ್ರಕಾಶ್ ಸಂಕಲನ , ವಿನಯ್. ಜಿ. ಆಲೂರ್ ಡಿ.ಐ, ಸಂತೋಷ್. ಸಿ.ಎಂ ಸಹ ನಿರ್ದೇಶನ , ಶ್ರೀನಿವಾಸ್ ವಸ್ತ್ರಲಂಕಾರವಿದೆ.