ಬೆಂಗಳೂರು, ಜನವರಿ 16: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ (ಕೆಪಿಸಿಸಿ) ಹೊಸ ಅಧ್ಯಕ್ಷರ ನೇಮಕವಾಗಬೇಕು ಎಂದು ಬುಧವಾರ ಬೆಳಗ್ಗೆ ಆಗ್ರಹಿಸಿದ್ದ ಸಚಿವ ಸತೀಶ್ ಜಾರಕಿಹೊಳಿ, ಹೈಕಮಾಂಡ್ನಿಂದ ಖಡಕ್ ಸಂದೇಶ ಬರುತ್ತಿದ್ದಂತೆಯೇ ಯೂಟರ್ನ್ ತೆಗೆದುಕೊಂಡಿದ್ದಾರೆ. ಬುಧವಾರ ರಾತ್ರಿ ಸಾಮಾಜಿಕ ಮಾಧ್ಯಮ ಫೇಸ್ಬುಕ್ ಮೂಲಕ ಸ್ಪಷ್ಟೀಕರಣ ನೀಡಿದ ಅವರು, ತಮ್ಮ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ. ಡಿಕೆ ಶಿವಕುಮಾರ್ ಬದಲಾವಣೆಗೆ ಆಗ್ರಹಿಸಿಲ್ಲ ಎಂದು ಹೇಳಿದ್ದಾರೆ.
ನಾನು ಹೇಳಿದ್ದರಲ್ಲಿ ಕೆಲವು ಸತ್ಯಾಂಶಗಳಿವೆ. ಕೆಲವು ಇಲ್ಲದ ವಿಚಾರಗಳನ್ನು ವೈಭವೀಕರಿಸಲಾಗಿದೆ. ಡಿಕೆ ಶಿವಕುಮಾರ್ ಬದಲಾವಣೆ ಮಾಡಿ ಎಂದು ನಾನು ಹೇಳಿಲ್ಲ. ಪಕ್ಷದಲ್ಲಿ ಮುಂದಿನ ಸಂಘಟನೆಯ ದೃಷ್ಟಿಯಿಂದ ಕೆಲವೊಂದು ಬದಲಾವಣೆಗಳನ್ನು ಮಾಡಬೇಕೆಂದು ಸಲಹೆ ನೀಡಿದ್ದೇನಷ್ಟೆ. ಹಾಗೆಂದು ಡಿಕೆ ಶಿವಕುಮಾರ್ ಅವರನ್ನು ಬದಲಾವಣೆ ಮಾಡಿ ಎಂದು ಹೇಳಿಲ್ಲ, ಇಂದೂ ಹೇಳುತ್ತಿಲ್ಲ, ಮುಂದೆಯೂ ಹೇಳುವುದಿಲ್ಲ. ಆದರೆ, ಇವತ್ತಿನ ವೇಗದ ಸ್ಥಿತಿಯಲ್ಲಿ ನಾ ಹೇಳಿರುವುದನ್ನು ಜನ ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಹೈಕಮಾಂಡ್ ನಿರ್ಧಾರ ಮಾಡಬೇಕು ಎಂದಿರುವುದನ್ನು ಹೈಲೈಟ್ ಮಾಡಬೇಕಿತ್ತು ಎಂದು ಅವರು ಹೇಳಿದರು.