ಬೈಲಹೊಂಗಲ- ಜಿಲ್ಲಾಡಳಿತ ಬೆಳಗಾವಿ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಜ. 12 ಹಾಗೂ 13 ರಂದು ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಲಿರುವ ಎಲ್ಲ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಬೇಕೆಂದು ಶಾಸಕ ಮಹಾಂತೇಶ ಕೌಜಲಗಿ ತಿಳಿಸಿದರು.
ಪಟ್ಟಣದ ರಾಣಿ ಚನ್ನಮ್ಮಾಜಿ ಐಕ್ಯ ಸ್ಥಳದ ಮುಂಭಾಗದಲ್ಲಿ ಸಂಗೊಳ್ಳಿ ರಾಯಣ್ಣ ಉತ್ಸವದ ಜ್ಯೋತಿಯಾತ್ರೆಗೆ ಪೂಜೆ ಸಲ್ಲಿಸಿ, ಬೀಳ್ಕೊಟ್ಟು ಸುದ್ದಿಗಾರರೊಂದಿಗೆ ಮಾತನಾಡಿದ ಅವರು 1ಕೋಟಿ ರೂ ಅನುದಾನದಲ್ಲಿ ಜ. 12 ಹಾಗೂ 13 ರಂದು ನಡೆಯಲಿರುವ ಉತ್ಸವದಲ್ಲಿ ಕಿತ್ತೂರು ಸಂಸ್ಥಾನದ ದ್ವಜಾರೋಹಣ,ರಾಯಣ್ಣ ಪುತ್ತಳಿಗೆ ಮಾಲಾರ್ಪಣೆ, ಕಲಾವಾಹಿನಿ, ವಸ್ತು ಪ್ರದರ್ಶನ,ವಿಚಾರ ಸಂಕೀರಣ,ಕುಸ್ತಿ ಪಂದ್ಯಾವಳಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ಸಾನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ,ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ,ಸಂಸದ ಜಗದೀಶ ಶೆಟ್ಟರ,ಶಾಸಕ ಬಾಬಾಸಾಹೇಬ ಪಾಟೀಲ, ಗ್ರಾ. ಪಂ. ಅಧ್ಯಕ್ಷೆ ರೂಪಾ ಚಚಡಿ ಸೇರಿದಂತೆ ಗಣ್ಯಮಾನ್ಯರು ಭಾಗಿಯಾಗಲಿದ್ದಾರೆ ಎಂದರು.
ಕರ್ನಾಟಕ ಪ್ರದೇಶ ಕುರುಬರ ಸಂಘ ತಾಲೂಕು ಘಟಕದ ಅಧ್ಯಕ್ಷ ವಿಜಯಕುಮಾರ ದಳವಾಯಿ ಮಾತನಾಡಿ ಸಂಗೊಳ್ಳಿ ಉತ್ಸವಕ್ಕೆ ಸರಕಾರದಿಂದ 1 ಕೋಟಿ ಬಿಡುಗಡೆಗೊಳಿಸಿ ವಿಜೃಂಭಣೆಯಿಂದ ಉತ್ಸವ ಜರುಗುವಲ್ಲಿ ಪ್ರಮುಖ ಪಾತ್ರವಹಿಸಿದ ಶಾಸಕ ಮಹಾಂತೇಶ ಕೌಜಲಗಿ ಅವರ ಕಾರ್ಯ ಶ್ಲಾಘನೀಯವೆಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಚನ್ನಮ್ಮಾಜಿ,ರಾಯಣ್ಣನವರ ಪುತ್ತಳಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಜ್ಯೋತಿಯಾತ್ರೆಗೆ ಬೀಳ್ಕೊಡಲಾಯಿತು. ತಹಸೀಲ್ದಾರ್ ಹಣಮಂತ ಶಿರಹಟ್ಟಿ, ಪುರಸಭೆ ಮುಖ್ಯಧಿಕಾರಿ ವಿರೇಶ ಹಸಬಿ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್. ಪ್ಯಾಟಿ,ಪಿಎಸ್ಐ ಎಫ್. ವಾಯ್. ಮಲ್ಲೂರ ಮುಖಂಡರಾದ ಡಾ. ಬಸವರಾಜ ಕಳ್ಳಿಬಡ್ಡಿ,ಲಕ್ಷ್ಮಣ ಸೋಮನಟ್ಟಿ,ಮಹಾಂತೇಶ ಹೊಸಮನಿ,ಸುನೀಲ ಪಟಾತ,ರಾಯಪ್ಪ ಚಂದರಗಿ,
ಫಕ್ಕಿರಪ್ಪ ಕರಿಗಾರ, ಮಲ್ಲಿಕಾರ್ಜುನ ದುಬ್ಬನಮರಡಿ,ಸಂತೋಷ ದೇವಲಾಪುರ, ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂಧಿಗಳು, ವಿದ್ಯಾರ್ಥಿಗಳು ಜ್ಯೋತಿಯಾತ್ರೆಗೆ ಸಾಕ್ಷಿಯಾದರು.