ಬೆಂಗಳೂರು, ಜನವರಿ 8: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಲ್ಲಿ ವಿಧಾನಪರಿಷತ್ ಬಿಜೆಪಿ ಸದಸ್ಯ ಸಿಟಿ ರವಿ ಅವರನ್ನು ಬೆಳಗಾವಿ ಪೊಲೀಸರು ಬಂಧಿಸಿದ ವಿಚಾರ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸದ್ದು ಮಾಡಿತ್ತು. ಪ್ರಕರಣ ಸಂಬಂಧ, ಮಧ್ಯಪ್ರವೇಶ ಮಾಡಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳ ಕಚೇರಿಗೆ ಡಿಸೆಂಬರ್ 31ರಂದೇ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪತ್ರ ಬರೆದಿದ್ದರು ಎಂಬುದು ಈಗ ತಿಳಿದುಬಂದಿದೆ. ಆದರೆ, ಮುಖ್ಯಮಂತ್ರಿಗಳ ಕಚೇರಿಯು ರಾಜ್ಯಪಾಲರ ಪತ್ರಕ್ಕೆ ಪ್ರತಿಕ್ರಿಯೆಯನ್ನೇ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ ವಿಧಾನ ಪರಿಷತ್ತಿನ ಗೌರವಾನ್ವಿತ ಸದಸ್ಯರಾದ ಸಿಟಿ ರವಿ ತಮ್ಮ ಸಹೋದ್ಯೋಗಿಗಳೊಂದಿಗೆ ನನ್ನನ್ನು ಭೇಟಿಯಾಗಿ ಬೆಳಗಾವಿಯಲ್ಲಿ ಅಧಿವೇಶನ ಮುಗಿದ ನಂತರ ಇತ್ತೀಚೆಗೆ ನಡೆದ ಘಟನೆಯ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದ್ದಾರೆ. ಬೆಳಗಾವಿ ಪೊಲೀಸ್ ಕಮಿಷನರ್ ಮತ್ತು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿಗಳು ಅಧೀನ ಅಧಿಕಾರಿಗಳೊಂದಿಗೆ ಅವರನ್ನು ಬಂಧಿಸಿ ಕಬ್ಬಿನ ಗದ್ದೆ, ಬಯಲುಸೀಮೆ, ಖಾನಾಪುರ, ಕಿತ್ತೂರು, ಲೋಕಾಪುರ, ಸಂಕೇಶ್ವರ ಮತ್ತು ವಿವಿಧೆಡೆ ಅಪಾಯಕಾರಿ ದೂರದ ಸ್ಥಳಗಳಿಗೆ ಕರೆದೊಯ್ದಿರುವ ಬಗ್ಗೆ ಸಿಟಿ ರವಿ ತಿಳಿಸಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿದ್ದಾಗ ರಕ್ತಸ್ರಾವವಾಗಿ ಗಾಯಗೊಂಡಿದ್ದರೂ ರಾತ್ರಿಯಿಡೀ 400 ಕಿಮೀ ದೂರ ಸುತ್ತಾಡಿಸಿದ್ದಾರೆ ಎಂದು ಅವರು ತಿಳಿಸಿರುತ್ತಾರೆ. ಅಲ್ಲದೆ, ಭಯಾನಕ ಚಿತ್ರಹಿಂಸೆ ಮತ್ತು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿರುವ ಬಗ್ಗೆ ದೂರಿದ್ದಾರೆ. ಇದು ಕ್ಷಮಿಸಲಾಗದ ಪೊಲೀಸ್ ದೌರ್ಜನ್ಯವಾಗಿದೆ ಎಂದು ರಾಜ್ಯಪಾಲರು ಮುಖ್ಯಮಂತ್ರಿಗಳ ಕಚೇರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.