ಯುಕೆ ಪ್ರಧಾನಿ ಏಷ್ಯನ್ ಗ್ರೂಮಿಂಗ್ ಗ್ಯಾಂಗ್ ಎಂಬ ಪದವನ್ನು ಬಳಕೆ ಮಾಡಿದ್ದು, ಇದಕ್ಕೆ ಭಾರತೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ನಲ್ಲಿ ನಡೆದ ಮಕ್ಕಳ ಲೈಂಗಿಕ ದೌರ್ಜನ್ಯ ಹಗರಣಕ್ಕೆ ಸಂಬಂಧಿಸಿದಂತೆ ಮಾತನಾಡುವಾಗ, ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ , ಏಷ್ಯನ್ ಗ್ರೂಮಿಂಗ್ ಗ್ಯಾಂಗ್ ಎಂದು ಉಲ್ಲೇಖಿಸಿದ್ದರು. ದುಷ್ಕರ್ಮಿಗಳು ಹೆಚ್ಚಾಗಿ ಪಾಕಿಸ್ತಾನಿ ಮೂಲದವರಾಗಿದ್ದರೂ, ಎಲಾನ್ ಮಸ್ಕ್ನ ಟೀಕೆಗೆ ವಿರುದ್ಧವಾಗಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಸ್ಟಾರ್ಮರ್ ಏಷ್ಯನ್ ಗ್ರೂಮಿಂಗ್ ಗ್ಯಾಂಗ್ ಎಂಬ ಪದವನ್ನು ಬಳಸಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.
ಗ್ರೂಮಿಂಗ್ ಗ್ಯಾಂಗ್ ಎಂದರೆನು? ಇದು ಸ್ತ್ರೀಯರನ್ನು ಶೋಷಿಸುವಂಥ ಗ್ಯಾಂಗ್. ಬ್ರಿಟನ್ನಿನ ಹೆಣ್ಣುಮಕ್ಕಳೇ ಇವರ ಟಾರ್ಗೆಟ್. ಇಂಗ್ಲೆಂಡ್ನಲ್ಲಿ ನೆಲೆ ನಿಂತಿರುವ ಶ್ರೀಮಂತರ ಮಕ್ಕಳೇ ಗ್ರೂಮಿಂಗ್ ಗ್ಯಾಂಗ್‌ನ ಖೆಡ್ಡಾಕ್ಕೆ ಬೀಳುತ್ತಿದ್ದಾರೆ. ಈ ಗ್ಯಾಂಗ್‌ನ ಸದಸ್ಯರು ಬ್ರಿಟಿಷ್ ಹೆಣ್ಮಕ್ಕಳನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಲೈಂಗಿಕವಾಗಿ ಬಳಸಿಕೊಂಡ ಸಹಸ್ರಾರು ಪ್ರಕರಣಗಳು ದಾಖಲಾಗಿವೆ. ಗ್ರೂಮಿಂಗ್ ಗ್ಯಾಂಗ್‌ಗಳ ಬಲೆಗೆ ಸಿಕ್ಕಿಬಿದ್ದವರ ಪೈಕಿ ಅಪ್ರಾಪ್ತರ ಸಂಖ್ಯೆ ಹೆಚ್ಚು.
ಶಾಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ, ಸಿಂಗಲ್ ಚೈಲ್ಡ್ ಆಗಿ ಒಬ್ಬಂಟಿಯಾಗಿರುವ, ಖಿನ್ನತೆಯಂಥ ಮಾನಸಿಕ ಸಮಸ್ಯೆ ಎದುರಿಸುತ್ತಿರುವ ಹೆಣ್ಮಕ್ಕಳಿಗೆ ಬ್ರಿಟಿಷ್ ಪಾಕಿಸ್ತಾನಿ ಹುಡುಗರು ನೆರವಾಗುವ ನಾಟಕವಾಡುತ್ತಾರೆ. ಆರಂಭದಲ್ಲಿ ಉಡುಗೊರೆಗಳನ್ನು ನೀಡಿ ರಂಜಿಸುತ್ತಾರೆ. ಕ್ರಮೇಣ ಈ ಸಲುಗೆ ಪ್ರೀತಿಗೆ ತಿರುಗುತ್ತದೆ. ಪಾರ್ಟಿಗಳಿಗೆ ಕರೆದೊಯ್ದು, ಮದ್ಯ ಮತ್ತು ಡ್ರಗ್ಸ್ ವ್ಯಸನಕ್ಕೆ ತಳ್ಳುತ್ತಾರೆ. ಹುಡುಗಿಯರು ಅವರನ್ನು ನಂಬುತ್ತಿದ್ದಂತೆಯೇ ಲೈಂಗಿಕವಾಗಿ ಬಳಸಿಕೊಳ್ಳುತ್ತಾರೆ.