ಮೈಸೂರು, ಡಿಸೆಂಬರ್ 30: ಮೈಸೂರಿನ ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿಡುವ ವಿಚಾರವಾಗಿ ನಗರಪಾಲಿಕೆ ಆಯುಕ್ತರಿಗೆ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಪತ್ರ ಬರೆದಿದ್ದು, ಕೂಡಲೇ ರಾಜಕುಮಾರಿ ರಸ್ತೆ ನಾಮಫಲಕ ಅಳವಡಿಸುವಂತೆ ಆಗ್ರಹಿಸಿದ್ದಾರೆ. ಮೈಸೂರು ನಗರ ಪಾಲಿಕೆ ವತಿಯಿಂದ ಪ್ರಿನ್ಸೆಸ್ ರೋಡ್ ನಾಮಫಲಕ ಅಳವಡಿಸಿ ಗೊಂದಲವನ್ನು ನಿವಾರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮೈಸೂರಿನ ಪ್ರಮುಖ ರಸ್ತೆಯೊಂದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನಿಡುವ ಬಗ್ಗೆ ಕೆಲವು ದಿನಗಳ ಹಿಂದೆ ಮೈಸೂರು ನಗರ ಪಾಲಿಕೆ ಪ್ರಸ್ತಾವ ಸಲ್ಲಿಸಿತ್ತು. ಇದರ ಬೆನ್ನಲ್ಲೇ ‘ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ಎಂಬ ಹೆಸರಿಡುವ ಪ್ರಸ್ತಾವಕ್ಕೆ ವಿರೋಧ ವ್ಯಕ್ತವಾಗಿದೆ. ಇದಕ್ಕೆ ಕಾರಣ, ಆ ರಸ್ತೆಗೆ ಈ ಹಿಂದೆ ‘ಪ್ರಿನ್ಸೆಸ್ ರೋಡ್’ ಎಂದು ನಾಮಕರಣ ಮಾಡಲಾಗಿತ್ತು. ರಾಜಮನೆತನದ ರಾಣಿಯ ನೆನಪಿಗಾಗಿ ಇಟ್ಟ ಹೆಸರನ್ನು ಬದಲಾಯಿಸುವುದು ಸಲ್ಲ ಎಂಬ ಕೂಗು ಈಗ ಕೇಳಿಬಂದಿದೆ.
ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂಬ ಹೆಸರನ್ನು ನಾಮಕರಣ ಮಾಡುವ ಪ್ರಸ್ತಾವನೆ ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿರುವ ಅವರು, ಹಲವು ದಾಖಲೆಗಳನ್ನೂ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪ್ರಿನ್ಸೆಸ್ ರಸ್ತೆ ಹೆಸರಿನ ದಾಖಲೆಗಳನ್ನೂ ನೀಡಿದ್ದಾರೆ. ಜತೆಗೆ ರೈಲ್ವೆ ಇಲಾಖೆಯಲ್ಲಿ ಉಲ್ಲೇಖವಿರುವ ಬಗ್ಗೆಯೂ ದಾಖಲೆ ನೀಡಿದ್ದಾರೆ.
ಮಾಜಿ ಸಂಸದ ಪ್ರತಾಪಸಿಂಹ ಸಭೆ ನಡಾವಳಿಯಲ್ಲೂ ‘ಪ್ರಿನ್ಸೆಸ್ ರಸ್ತೆ’ ಎಂದು ನಮೂದಾಗಿರುವ ದಾಖಲೆ ನೀಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಹೆಸರು ರಸ್ತೆಗೆ ಇರುವ ಪ್ರಸ್ತಾವಕ್ಕೆ ಬೆಂಬಲ ನೀಡದಂತೆ ಪ್ರತಾಪಸಿಂಹ ಅವರಿಗೂ ಮನವಿ ಮಾಡಿದ್ದಾರೆ.