ಬೀದರ್, ಡಿಸೆಂಬರ್ 29: ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಭಾಲ್ಕಿ ತಾಲೂಕಿನ ಕಟ್ಟಿತೂಗಾಂವ್ ಗ್ರಾಮದ ಮೃತ ಸಚಿನ್ ಪಾಂಚಾಳ್ ನಿವಾಸಕ್ಕೆ ಬಿಜೆಪಿ ನಿಯೋಗ ಭೇಟಿ ನೀಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಪರಿಷತ್ ವಿಪಕ್ಷನಾಯಕ ಛಲವಾದಿ, ಬಿಜೆಪಿಯ ಹಲವು ಶಾಸಕರು, ಮುಖಂಡರು ಸಚಿನ್ ನಿವಾಸಕ್ಕೆ ಭೇಟಿ ನೀಡಿ ನಾಯಕರು ಸಾಂತ್ವನ ಹೇಳಿದರು. ವಿಜಯೇಂದ್ರ ಬರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಬಿವೈ ವಿಜಯೇಂದ್ರ, ಸಚಿವ ಪ್ರಿಯಾಂಕ್ ಖರ್ಗೆ ಅವರ ದುಷ್ಟ ಕೂಟದ ಸದಸ್ಯರ ಕಿರುಕುಳ, ಬೆದರಿಕೆಗಳನ್ನು ಸಹಿಸಲಾಗದೇ ಆತ್ಮಹತ್ಯೆಗೆ ಶರಣಾಗಿರುವ ಅಮಾಯಕ ಗುತ್ತಿಗೆದಾರ ಸಚಿನ್ ಅವರ ನಿವಾಸಕ್ಕೆ ತೆರಳಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲಾಯಿತು. ಅಕ್ಷರಶಃ ಸಚಿನ್ ಸಾವಿನಿಂದ ದಿಗ್ಮೂಢ ಸ್ಥಿತಿಯಲ್ಲಿರುವ ಕುಟುಂಬದ ಸ್ಥಿತಿ ಮಾನವೀಯತೆ ಇರುವ ಎಂಥವರ ಅಂತಃಕರಣವನ್ನೂ ಕಲಕುತ್ತದೆ ಎಂದಿದ್ದಾರೆ.
ಅನಾಥ ಪ್ರಜ್ಞೆ ಎದುರಿಸುತ್ತಿರುವ ಮೃತರ ಆಶ್ರಯಿಸಿದ್ದ ಕುಟುಂಬ ಸದಸ್ಯರ ಹಾಗೂ ಬಂಧುಗಳ ಆಕ್ರಂದನದ ಶಾಪ ಕಾಂಗ್ರೆಸ್ ಸರ್ಕಾರವನ್ನು ತಟ್ಟದೇ ಬಿಡದು, ದುಷ್ಕರ್ಮಿಗಳ ಗುಂಪನ್ನು ಪೋಷಿಸುತ್ತಿರುವ ಪ್ರಿಯಾಂಕ್ ಖರ್ಗೆ ಇದರ ಫಲ ಅನುಭವಿಸಲೇಬೇಕು. ಸಚಿನ್ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ರಾಜ್ಯ ಬಿಜೆಪಿ ಹೋರಾಟ ಕೊನೆಯಾಗದು, ನೊಂದ ಸಚಿನ್ ಕುಟುಂಬದೊಂದಿಗೆ ನಾವಿದ್ದೇವೆ ಎಂಬ ಅಭಯ ನೀಡಿದ್ದಾರೆ.