ಗ್ಯಾಸ್‌ ಸಿಲಿಂಡರ್‌ ಸ್ಫೋಟ: ಅಯ್ಯಪ್ಪ ಮಾಲಾಧಾರಿಗಳು ಕಿಮ್ಸ್‌ಗೆ ದಾಖಲು; ಸಂತೋಷ ಲಾಡ್, ಪರಮೇಶ್ವರ್ ಪರಿಹಾರದ ಭರವಸೆ

Ravi Talawar
ಗ್ಯಾಸ್‌ ಸಿಲಿಂಡರ್‌ ಸ್ಫೋಟ: ಅಯ್ಯಪ್ಪ ಮಾಲಾಧಾರಿಗಳು ಕಿಮ್ಸ್‌ಗೆ ದಾಖಲು; ಸಂತೋಷ ಲಾಡ್, ಪರಮೇಶ್ವರ್ ಪರಿಹಾರದ ಭರವಸೆ
WhatsApp Group Join Now
Telegram Group Join Now

ಹುಬ್ಬಳ್ಳಿ, ಡಿ.24: ಹುಬ್ಬಳ್ಳಿಯ ಸಾಯಿನಗರದ ಅಚ್ಚವ್ವನ ಕಾಲೋನಿಯ ಈಶ್ವರ ದೇವಸ್ಥಾನದಲ್ಲಿ ಅಡುಗೆ ಅನಿಲ (ಸಿಲಿಂಡರ್) ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡು ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒಂಬತ್ತು ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯವನ್ನು ಇಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಹಾಗೂ ಗೃಹ ಸಚಿವರಾದ ಡಾ. ಜಿ ಪರಮೇಶ್ವರ ಅವರು ಇಂದು ವಿಚಾರಿಸಿದರು.

ಇಬ್ಬರೂ ಸಚಿವರು ಇಂದು ಆಸ್ಪತ್ರೆಗೆ ಭೇಟಿ ನೀಡಿದಾಗ ಆಸ್ಪತ್ರೆ ಆವರಣದಲ್ಲಿ ಗಾಯಾಳುಗಳ ಸಂಬಂಧಿಕರು ಚಿಕಿತ್ಸೆಗೆ ಅಗತ್ಯ ನೆರವು ನೀಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು ಧೈರ್ಯ ಹೇಳಿದರು.

ಈ ವೇಳೆ ಮಾತನಾಡಿದ ಸಚಿವ ಸಂತೋಷ್‌ ಲಾಡ್‌ ಅವರು, ಇಂತಹ ಘಟನೆ ನಡೆಯಬಾರದಿತ್ತು. ನಿಮ್ಮ ನೋವಿನಲ್ಲಿ ನಾನೂ ಭಾಗಿ, ಅಗತ್ಯ ನೆರವು ನೀಡಲಾಗುವುದು. ಈಗಾಗಲೇ ಎಲ್ಲ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಕಿಮ್ಸ್ ನ ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದೇನೆ. ಅವರೆಲ್ಲರು ಚೇತರಿಸಿಕೊಳ್ಳುವ ವರೆಗೂ ಚಿಕಿತ್ಸೆಯ ಮೇಲೆ ನಿಗಾ ಇಡುವಂತೆ ಜಿಲ್ಲಾಡಳಿತಕ್ಕೂ ಸೂಚಿಸಿದ್ದೇ‌ನೆ ಎಂದು ಹೇಳಿದರು.

ಗೃಹ ಸಚಿವ ಡಾ. ಜಿ ಪರಮೇಶ್ವರ್‌ ಅವರು ಮಾತನಾಡಿ, ಗಾಯಾಳುಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಒದಗಿಸುವಂತೆ ಮುಖ್ಯಮಂತ್ರಿಗಳ ಬಳಿ ಇಂದೇ ಮನವಿ ಮಾಡಲಾಗುವುದು. ಗಾಯಾಳುಗಳು ಬದುಕಬೇಕು. ಅವರಿಗೆ ಸೂಕ್ತ ಚಿಕಿತ್ಸೆ ದೊರೆಯಬೇಕು. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

9 ಅಯ್ಯಪ್ಪ ಮಾಲಾಧಾರಿಗಳ ಪೈಕಿ ಪ್ರಕಾಶ ಬಾರಕೇರ ಅವರ ದೇಹ ಶೇ 90 ರಷ್ಟು ಸುಟ್ಟಿದೆ. ಅವರಿಗೆ ಹೆಚ್ಚಿನ ಕಾಳಜಿ ವಹಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಉಳಿದ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಸಂಸ್ಥೆಯ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳು ಸಹ ಕೆಎಂಸಿಆರ್‌‌ಐಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಲಿದ್ದಾರೆ. ಪರಿಹಾರ ನೀಡಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತದೆ. ಈ ಘಟನೆ ಬಗ್ಗೆ ತನಿಖೆಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಅಬ್ಬಯ್ಯ ಪ್ರಸಾದ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ. ಆರ್.ಜೆ., ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ್, ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ್ ಸಿ.ಆರ್., ಕೆಎಂಸಿಆರ್‌‌ಐ‌ ನಿರ್ದೇಶಕರಾದ ಡಾ.ಎಸ್.ಎಫ್.ಕಮ್ಮಾರ, ಹುಬ್ಬಳ್ಳಿ ಶಹರ ತಹಶೀಲ್ದಾರರಾದ ಕಲಗೌಡ ಪಾಟೀಲ ಸೇರಿದಂತೆ ಅಧಿಕಾರಿಗಳು ಇತರರು ಹಾಜರಿದ್ದರು.

WhatsApp Group Join Now
Telegram Group Join Now
Share This Article