ಬೆಂಗಳೂರು, ಡಿಸೆಂಬರ್ 23: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಎಂಎಲ್ಸಿ ಸಿಟಿ ರವಿ ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಾರೆ ಎಂಬ ಆರೋಪ ಸಂಬಂಧ ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಕ್ರಿಯಿಸಿದ್ದು, ಅದು ಮುಗಿದುಹೋದ ಅಧ್ಯಾಯ ಎಂದಿದ್ದಾರೆ. ಸದನದಲ್ಲಿ ನಡೆದಿದೆ ಎನ್ನಲಾದ ಘಟನೆ ಬಗ್ಗೆ ಕೂಲಂಕುಷವಾಗಿ ಚರ್ಚೆ ಮಾಡಿದ್ದೇವೆ. ಸದನದವನ್ನು ಅನಿರ್ದಿಷ್ಟವಾಧಿಗೆ ಮುಂದೂಡಿಕೆ ಬಳಿಕ ಸಿಟಿ ರವಿ ಬಂಧನ ಆಗಿತ್ತು. ಸದ್ಯ, ಎರಡೂ ಕಡೆಯಿಂದ ನಮಗೆ ಯಾವುದೇ ದೂರು ಬಂದಿಲ್ಲ. ಹಕ್ಕುಚ್ಯುತಿ ಆಗಿದೆ ಅಂತ ದೂರು ಕೊಟ್ಟರೆ ನಂತರ ಕ್ರಮ ಕೈಗೊಳ್ಳುತ್ತೇವೆ ಎಂದರು.
ಸುವರ್ಣ ವಿಧಾನ ಸೌಧದಲ್ಲಿ ಎಂಎಲ್ಸಿ ಸಿಟಿ ರವಿ ಮೇಲೆ ಹಲ್ಲೆಗೆ ಯತ್ನ ಪ್ರಕರಣ ಸಂಬಂಧ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಠಾಣೆಯಲ್ಲಿ 10 ಜನ ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಸೆಕ್ರೆಟರಿ ಕಚೇರಿಯಿಂದ ಕಮಿಷನರ್ ಕಚೇರಿಗೆ ದೂರಿನ ಪತ್ರ ಸಲ್ಲಿಕೆಯಾಗಿತ್ತು. ಎಂಎಲ್ಸಿ ಡಿಎಸ್.ಅರುಣ್, ಎಸ್ವಿ ಸಂಕನೂರ, ಕಿಶೋರ್ ಬಿಆರ್ ಬೆಂಗಳೂರಿನ ಸೆಕ್ರೆಟರಿ ಕಚೇರಿಗೆ ದೂರು ಸಲ್ಲಿಸಿದ್ದರು. ಅಲ್ಲಿಂದ ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಪತ್ರ ರವಾನೆಯಾಗಿತ್ತು. ಅದರಂತೆ, ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಐಪಿಸಿ ಸೆಕ್ಷನ್ 189(2), 191(2), 126(2), 352, 351(4) ಕಲಂ ಹಾಗೂ 190ರ ಅಡಿ ದೂರು ಎಫ್ಐಆರ್ ದಾಖಲಿಸಲಾಗಿದೆ.