Ad imageAd image

ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಜಾರ್ಚ್: ಧಾರವಾಡ ಹೈಕೋರ್ಟ್ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಕೆ

Ravi Talawar
ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಜಾರ್ಚ್: ಧಾರವಾಡ ಹೈಕೋರ್ಟ್ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಕೆ
WhatsApp Group Join Now
Telegram Group Join Now

ಧಾರವಾಡ: ಬೆಳಗಾವಿ ಸುವರ್ಣಸೌಧದ ಎದುರು ಪಂಚಮಸಾಲಿ ಹೋರಾಟಗಾರರ ಮೇಲೆ ಪೊಲೀಸರಿಂದ ಲಾಠಿ ಜಾರ್ಚ್ ವಿಚಾರಕ್ಕೆ ಸಂಬಂಧ ಧಾರವಾಡ ಹೈಕೋರ್ಟ್ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಈ ಬಗ್ಗೆ ಸರ್ಕಾರ, ಗೃಹ ಇಲಾಖೆ, ಪೊಲೀಸ್ ಇಲಾಖೆಗೆ ಧಾರವಾಡ ಹೈಕೋರ್ಟ್ ಏಕಸದಸ್ಯ ಪೀಠದಿಂದ ನೋಟಿಸ್ ಜಾರಿಯಾಗಿದೆ.

12 ಜನರ ಮೇಲೆ ಎಫ್‌ಐಆರ್ ಆಗಿದೆ: ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ವಕೀಲರ ಪರಿಷತ್ ಸೇರಿ ನಾಲ್ವರು ಧಾರವಾಡ ಹೈಕೋರ್ಟ್​​​ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ಬಗ್ಗೆ ಧಾರವಾಡದಲ್ಲಿ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ”ಲಾಠಿ ಚಾರ್ಜ್ ಬಳಿಕ ಎಫ್‌ಐಆರ್ ಆಗಿದೆ. 12 ಜನರ ಮೇಲೆ ಎಫ್‌ಐಆರ್ ಮಾಡಿದ್ದಾರೆ. ಅದನ್ನು ರದ್ದುಪಡಿಸಬೇಕು ಎಂದು ಕೇಳಿದ್ದೆವು. ಸಿಎಂ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದೆವು. ಆದರೆ, ಯಾವುದಕ್ಕೂ ಸಿಎಂ ಸ್ಪಂದಿಸಿಲ್ಲ. ಹೀಗಾಗಿ ಕೋರ್ಟ್ ಮೊರೆ ಹೋಗಿದ್ದೇವೆ” ಎಂದು ಸ್ಪಷ್ಟಪಡಿಸಿದರು.

”ನಮ್ಮ ಪರವಾಗಿ ಪ್ರಭುಲಿಂಗ ನಾವದಗಿ, ಪೂಜಾ ಸವದತ್ತಿ ವಾದ ಮಂಡಿಸಿದ್ದಾರೆ. ಪ್ರತಿವಾದಿಗಳಿಗೆ ನೋಟಿಸ್ ಜಾರಿಗೆ ಆದೇಶ ಆಗಿದೆ. ಅನಿವಾರ್ಯವಾಗಿ ನ್ಯಾಯಾಲಯದ ಮೊರೆ ಹೋಗಿದ್ದೇವೆ. ಹಲ್ಲೆ ಆಗಿದ್ದಕ್ಕೆ ಸಮಾಜದವರು ದೃತಿಗೆಡುವುದು ಬೇಡ. ಹಲ್ಲೆ ಆದವರಿಗೆ ಆತ್ಮಸ್ಥೈರ್ಯ ತುಂಬಲಿದ್ದೇವೆ. ಬೆಳಗಾವಿಯಲ್ಲಿ ಡಿ.23ಕ್ಕೆ ಗಾಯಗೊಂಡವರ ಮನೆ ಮನೆಗೆ ಭೇಟಿ ನೀಡುತ್ತೇವೆ” ಎಂದರು.

144 ಸೆಕ್ಷನ್ ಜಾರಿ ಆಗಿರಲಿಲ್ಲ: ಪಂಚಮಸಾಲಿ ಲಾಠಿ ಚಾರ್ಜ್ ವಿರುದ್ಧ ರಿಟ್ ಅರ್ಜಿ ಸಲ್ಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯವಾದಿ ಪೂಜಾ ಸವದತ್ತಿ ಪ್ರತಿಕ್ರಿಯಿಸಿ, ”ಹೋರಾಟದ ವೇಳೆ 144 ಸೆಕ್ಷನ್ ಜಾರಿ ಆಗಿರಲಿಲ್ಲ, ನೇರವಾಗಿ ಲಾಠಿ ಚಾರ್ಜ್ ಮಾಡಿದ್ದಾರೆ. ಇದನ್ನೆಲ್ಲ ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೇವೆ. ಲಾಠಿ ಚಾರ್ಜ್ ಬಳಿಕ ಪುನಃ ಸತ್ಯಾಗ್ರಹ ಇತ್ತು. ಸ್ವಾಮೀಜಿ ಡಿ.19ರವರೆಗೆ ಹೋರಾಟದಲ್ಲಿದ್ದರು. ಹೀಗಾಗಿ, ನಿನ್ನೆ ರಿಟ್ ಅರ್ಜಿ ಸಲ್ಲಿಸಲಾಗಿದೆ” ಎಂದು ವಿವರಿಸಿದರು.

”ಪ್ರಭುಲಿಂಗ ನಾವದಗಿ ಮತ್ತು ನಾವು ಕೇಸ್ ರೆಡಿ ಮಾಡಿ ಅರ್ಜಿ ಹಾಕಿದ್ದೇವೆ ಮಧ್ಯಾಹ್ನ ವಿಚಾರಣೆ ಮಾಡಿ ನೋಟಿಸ್ ಜಾರಿಗೆ ಆದೇಶಿಸಲಾಗಿದೆ. ನ್ಯಾಯಾಂಗ ತನಿಖೆ ಆಗಬೇಕು. ನ್ಯಾಯಾಂಗ ಆಯೋಗದಿಂದ ಕಮೀಟಿ ರಚನೆಗೆ ಆಗ್ರಹಿಸಿದ್ದೇವೆ. ಲಾಠಿ ಚಾರ್ಜ್ ಮಾಡಲು ಆದೇಶ ಕೊಟ್ಟವರ ವಿರುದ್ಧ ಕ್ರಮ ಆಗಬೇಕು. ಸರ್ಕಾರದ ಹತ್ತು ಅಂಗಗಳನ್ನು ಪ್ರತಿವಾದಿ ಮಾಡಲಾಗಿದೆ. ಸರ್ಕಾರ, ಗೃಹ ಇಲಾಖೆ, ಪೊಲೀಸ್ ಇಲಾಖೆಯನ್ನೂ ಒಳಗೊಂಡಿದೆ” ಎಂದರು.

WhatsApp Group Join Now
Telegram Group Join Now
Share This Article