ಬೆಂಗಳೂರು: ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರ ಹೆಸರನ್ನು ದುರ್ಬಳಕೆ ಮಾಡಿ, ವಂಚಿಸಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಆನೇಕಲ್ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ಮೂಲದ ಆನಂದ್ ಕುಮಾರ್ ಬಂಧಿತ ಆರೋಪಿ. ಲೋಕಾಯುಕ್ತ ಇಲಾಖೆಯ ಉಪನಿಬಂಧಕ ಅರವಿಂದ್ ಎನ್.ವಿ. ನೀಡಿದ ದೂರಿನ ಮೇರೆಗೆ ಆನೇಕಲ್ ಇನ್ ಸ್ಪೆಕ್ಟರ್ ಬಿ.ಎಂ. ತಿಪ್ಪೇಸ್ವಾಮಿ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.
ಆನೇಕಲ್ ವಿಶೇಷ ತಹಶೀಲ್ದಾರ್ ಕರಿಯಾ ನಾಯಕ್ ಕಚೇರಿಗೆ ಆಗಮಿಸಿದ್ದ ಆರೋಪಿ ಆನಂದ್, ತಾನು ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪರ ಸಂಬಂಧಿಕ ಹಾಗೂ ತಾನು ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಉದ್ಯೋಗಿ ಎಂದು ಹೇಳಿದ್ದಾರೆ.
ಬಳಿಕ ಸರ್ಜಾಪುರ ಹೋಬಳಿ ಚಿಕ್ಕನಹಳ್ಳಿ ಸನಂ 18/ಪಿ16 ಹೊಸ ನಂಬರ್ 191 ರ ಒಂದು ಎಕರೆ ಜಮೀನನ್ನು ಎಸ್.ಎನ್.ರಾಮಸ್ವಾಮಿ ಅಡಿಗ ಎಂಬವರಿಂದ ನಾರಾಯಣ ಅಡಿಗ ಎಂಬವರ ಹೆಸರಿಗೆ ಖಾತೆ ಬದಲಾಯಿಸುವಂತೆ ಒತ್ತಡ ಹೇರಿದ್ದಾನೆ.
ಇದಷ್ಟೇ ಅಲ್ಲದೆ, ತನ್ನ ಮೊಬೈಲ್ ನಿಂದ ಯಾರಿಗೋ ಕಾಲ್ ಮಾಡಿ ಉಪ ಲೋಕಾಯುಕ್ತರು ಮಾತನಾಡುತ್ತಿದ್ದಾರೆಂದು, ಮತ್ತೊಂದು ಬಾರಿ ಲೋಕಾಯುಕ್ತ ಐ.ಜಿ. ಮಾಡನಾಡುತ್ತಿರುತ್ತಾರೆಂದು, ಮತ್ತೊಂದು ಬಾರಿ ಲೋಕಾಯುಕ್ತ ಎಸ್ಪಿ ಮಾತನಾಡುತ್ತಿದ್ದಾರೆ ಹೇಳಿ ತಹಶೀಲ್ದಾರ್ ರಿಗೆ ಮೊಬೈಲ್ ಕೊಟ್ಟು ಮಾತನಾಡಿಸಿದ್ದಾನೆ. ಆ ಕಡೆಯಿಂದ ಮಾತನಾಡಿದ ವ್ಯಕ್ತಿಗಳು ತಾವು ಲೋಕಾಯುಕ್ತ ನ್ಯಾಯಮೂರ್ತಿ, ಲೋಕಾಯುಕ್ತ ಐ.ಜಿ. ಮತ್ತು ಲೋಕಾಯುಕ್ತ ಎಸ್ಪಿ ಎಂದು ಹೇಳಿ ಮಾತನಾಡಿದ್ದಲ್ಲದೆ, ನಿಮ್ಮ ಬಳಿ ಬಂದಿರುವ ಆನಂದ್ ಕುಮಾರ್ ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾನೆ, ಆತನ ಕೆಲಸವನ್ನು ಯಾವುದೇ ತಡ ಮಾಡದೆ ಬೇಗ ಮಾಡಿಕೊಡಿಎಂದು ಒತ್ತಡ ಹೇರಿದ್ದಾರೆ. ಈ ಬಗ್ಗೆ ಸಂಶಯಗೊಂಡ ವಿಶೇಷ ತಹಶೀಲ್ದಾರ್ ಕರಿಯಾ ನಾಯಕ್ ಅವರು ಲೋಕಾಯುಕ್ತಕ್ಕೆ ಮಾಹಿತಿ ನೀಡಿದ್ದಾರೆ.
ಪರಿಶೀಲನೆ ಬಳಿಕ ಆನಂತ್ ಲೋಕಾಯುಕ್ತದಲ್ಲಿ ಕೆಲಸ ಮಾಡುತ್ತಿಲ್ಲ ಎಂಬುದು ಖಚಿತವಾಗಿದೆ. ಅಲ್ಲದೆ, ಆರೋಪಿ ತನ್ನ ಬಳಿ ಮೂರು ಮೊಬೈಲ್ ನಂಬರ್ ಇಟ್ಟುಕೊಂಡಿದ್ದು, ಅವುಗಳಿಂದ ಕರೆ ಮಾಡಿದರೆ, ಟ್ರೂ ಕಾಲರ್ ನಲ್ಲಿ ಕರ್ನಾಟಕ ಲೋಕಾಯುಕ್ತ ಕಚೇರಿ, ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಹೆಸರು ಬರುವಂತೆ ಮಾಡಿಟ್ಟುಕೊಂಡಿರುವುದು ಪತ್ತೆಯಾಗಿದೆ. ಬಳಿಕ ನಾಯಕ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಆರೋಪಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.