ಬೆಳಗಾವಿ, ಡಿಸೆಂಬರ್ 12: ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬಸವಣ್ಣನವರ ಬಗ್ಗೆ ಹಗುರವಾಗಿ, ಅವಹೇಳನಕರವಾಗಿ ಮಾತನಾಡಿ ಸಮುದಾಯದ, ಲಿಂಗಾಯತ ಧರ್ಮ ನಿಷ್ಠರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಅಲ್ಲದೇ ವಿಶ್ವಗುರುವಿಗೇ ಅಗೌರವ ತೋರಿದ್ದಾರೆ. ಹೀಗಾಗಿ ಕೂಡಲೇ ಶಾಸಕ ಯತ್ನಾಳ್ ಬಹಿರಂಗ ಕ್ಷಮೆ ಕೋರಬೇಕು ಎಂದು ಬೆಳಗಾವಿಯ ಲಿಂಗಾಯತ ಧರ್ಮಮಹಾಪೀಠದ ಜಗದ್ಗುರು ಬಸವಪ್ರಭು ಮಹಾಸ್ವಾಮಿ ಆಗ್ರಹಿಸಿದ್ದಾರೆ.
ಇವರಂತೆ ಈ ಮೊದಲು ಧರ್ಮ ನಿಂದನೆ ಮಾಡಿದ್ದ ಪಂಚಾಬ ಡಿಸಿಎಂ ಅಪರಾಧಿ ಫಲಕವನ್ನು ಕೊರಳಿಗೆ ನೇತು ಹಾಕಿಕೊಂಡು ಧರ್ಮ ಕ್ಷೇತ್ರದಲ್ಲಿ ಸೇವಾ ಶಿಕ್ಷೆ ಅನುಭವಿಸಬೇಕಾಯಿತು. ಹೀಗಾಗಿ ಸಕಲರಿಗೂ ಲೇಸನ್ನೇ ಬಯಸಿದ ಬಸವಣ್ಣನವರ ಕುರಿತು ಆಲೋಚಿಸಿ ಮಾತನಾಡಬೇಕು, ಈಗಾಗಲೇ ಆಡಿರುವ ನಿಂದನೆಯ ಮಾತುಗಳಿಗೆ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಬಸವಪ್ರಭು ಮಹಾಸ್ವಾಮಿ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.