ಬೆಳಗಾವಿ : ಭಗವದ್ಗೀತೆ ಅಭಿಯಾನದ ಜಿಲ್ಲಾ ಮಟ್ಟದ ಸ್ಫರ್ಧೆಗಳು ಮಂಗಳವಾರ ಆನಗೋಳದ ಸಂತಮೀರಾ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಭಗವದ್ಗೀತೆ ಅಭಿಯಾನ ಸಮಿತಿಯ ಕಾರ್ಯಾಧ್ಯಕ್ಷರೂ, ಸಂತ ಮೀರಾ ಶಾಲೆಯ ಅಧ್ಯಕ್ಷರೂ ಆಗಿರುವ ಪರಮೇಶ್ವರ ಹೆಗಡೆ ಮತ್ತು ಸಮಿತಿ ಕಾರ್ಯದರ್ಶಿ, ಹಿರಿಯ ಪತ್ರಕರ್ತ ಎಂ.ಕೆ.ಹೆಗಡೆ ಸ್ಫರ್ಧಾ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು.
ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ವಿದ್ಯಾರ್ಥಿಗಳು ಭಗವದ್ಗೀತೆಯ ವಿವಿಧ ವಿಭಾಗಗಳ ಸ್ಫರ್ಧೆಯಲ್ಲಿ ಭಾಗವಹಿಸಿದ್ದರು. ಕಿಶೋರ ಮತ್ತು ಪ್ರೌಢ ಎನ್ನುವ ಎರಡು ವಿಭಾಗಗಳಲ್ಲಿ, ಭಾಷಣ ಸ್ಫರ್ಧೆ, ಕಂಠಪಾಠ ಸ್ಫರ್ಧೆ, ರಸಪ್ರಶ್ನೆ ಸ್ಫರ್ಧೆಗಳು ನಡೆದವು.
ಸ್ಫರ್ಧೆಯ ನಂತರ ವಿಜೇತರಿಗೆ ಪರಮೇಶ್ವರ ಹೆಗಡೆ, ಎಂ.ಕೆ.ಹೆಗಡೆ, ಸಂತಮೀರಾ ಶಾಲೆಯ ಆಡಳಿತಾಧಿಕಾರಿ ರಾಘವೇಂದ್ರ ಕುಲಕರ್ಣಿ ಬಹುಮಾನಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪರಮೇಶ್ವರ ಹೆಗಡೆ, ಭಗವದ್ಗೀತೆ ಭಗವಂತನಿಂದ ಬಂದ ಸಂದೇಶ. ಅದನ್ನು ಪ್ರತಿಯೊಬ್ಬರಿಗೂ ತಲುಪಿಸಬೇಕೆನ್ನುವ ಕಾರಣದಿಂದ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಿಂದ ಕಳೆದ 18 ವರ್ಷಗಳಿಂದ ಭಗವದ್ಗೀತೆ ಅಭಿಯಾನ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ವಿದ್ಯಾ ಹೆಗಡೆ, ಶಾಂತಾ ಕಲ್ಲೂರಾಯ, ವಸುಮತಿ ಹೆಗಡೆ, ಸುಜಾತಾ ದಪ್ತಾರದಾರ್, ಶೋಭಾ ಹೆಗಡೆ, ಸಾವಿತ್ರಿ ಹೆಗಡೆ ನಿರ್ಣಾಯಕರಾಗಿ ಆಗಮಿಸಿದ್ದರು. ಶಾಲೆಯ ಮುಖ್ಯಾಧ್ಯಾಪಕಿ ಸುಜಾತಾ ದಪ್ತಾರದಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸರೋಜಾ ಕಟಗೇರಿ ಮತ್ತು ರೂಪಾ ಕುಮಟಾಕರ್ ಮತ್ತು ವೀಣಾ ಜೋಶಿ ಕಾರ್ಯಕ್ರಮ ನಿರೂಪಿಸಿದರು.
ಭಗವದ್ಗೀತೆ ಅಭಿಯಾನದ ರಾಜ್ಯಮಟ್ಟದ ಸ್ಫರ್ಧೆಗಳು ಡಿಸೆಂಬರ್ 13ರಂದು ಬೆಳಗ್ಗೆ 10.30ರಿಂದ ವಿಜಯಪುರದ ವಿದ್ಯಾಭಾರತಿ ಶಾಲೆಯಲ್ಲಿ ನಡೆಯಲಿದೆ. ಜಿಲ್ಲಾಮಟ್ಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆಯದವರು ರಾಜ್ಯಮಟ್ಟದ ಸ್ಫರ್ಧೆಗಳಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.