ಬೆಂಗಳೂರು: ಅಖಿಲ ಭಾರತ ಪೊಲೀಸ್ ಲಾನ್ ಟೆನಿಸ್ ಚಾಂಪಿಯನ್ಶಿಪ್ನ 25ನೇ ಆವೃತ್ತಿಯು ನವೆಂಬರ್ 26, ಮಂಗಳವಾರದಿಂದ ಆರಂಭವಾಗಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಐಜಿಪಿ ಜೋಸೆಫ್ ಮೋಹನ್ ಅವರು, ಸಿಐಎಸ್ಎಫ್ನ ವಿಶೇಷ ಮಹಾನಿರ್ದೇಶಕ (ಎಸ್ಡಿಜಿ) ಪ್ರವೀರ್ ರಂಜನ್ ಅವರು ಪಂದ್ಯಾವಳಿಗೆ ಚಾಲನೆ ನೀಡಲಿದ್ದು, ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಸಮಾರೋಪ ಸಮಾರಂಭವನ್ನು ನೆರವೇರಿಸಲಿದ್ದಾರೆ. ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಶನ್ (ಕೆಎಸ್ಎಲ್ಟಿಎ) ಕ್ರೀಡಾಂಗಣ ಮತ್ತು ಕಂಠೀರವ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿದಿ ನೀಡಿದರು.
ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್ಎಫ್) ಆಯೋಜಿಸಿರುವ ನಾಲ್ಕು ದಿನಗಳ ಪಂದ್ಯಾವಳಿಗೆ ಆಂಧ್ರ ಪ್ರದೇಶ, ತೆಲಂಗಾಣ, ಅಸ್ಸಾಂ, ಬಿಹಾರ, ಹಿಮಾಚಲ ಪ್ರದೇಶ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ ರಾಜ್ಯಗಳ ಪೊಲೀಸ್, ಸಿಆರ್ಪಿಎಫ್, ಗುಪ್ತಚರ ವಿಭಾಗ, ರಾಷ್ಟ್ರೀಯ ಭದ್ರತಾ ಪಡೆ ಸೇರಿದಂತೆ 21 ತಂಡಗಳು ಹೆಸರು ನೋಂದಾಯಿಸಿದ್ದು, 124 ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ ಎಂದು ಹೇಳಿದರು.