ಇಂಡಿ: ತಮ್ಮ ಜಮೀನಿನಿಂದ ಬಂದ ಆರ್ಥಿಕ ಲಾಭವನ್ನು ಸಂಪೂರ್ಣವಾಗಿ ಶಿಕ್ಷಣ ಸಂಸ್ಥೆಗೆ ಹಾಕಿ, ಗಡಿ ಭಾಗದ ಗ್ರಾಮೀಣ ಮಕ್ಕಳಿಗೆ ಆಂಗ್ಲ ಮಾಧ್ಯಮದ ಶಿಕ್ಷಣ ನೀಡುತ್ತಿರುವ ಹಜರತ ನಾಸೀರಜಂಗಸಾಹೇಬ ದರ್ಗಾ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇಮಾಭಿವೃದ್ಧಿ ಸಂಘವು ಎಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ರವಿವಾರದಂದು ತಾಲೂಕಿನ ಬರಗುಡಿ ಗ್ರಾಮದ ಶಾಲಾ ಆವರಣದಲ್ಲಿ ಹಜರತ ನಾಸೀರಜಂಗಸಾಹೇಬ ದರ್ಗಾ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಯುಗದಲ್ಲಿ ಗ್ರಾಮೀಣ ಬಡ ಮಕ್ಕಳಿಗೆ ಶಿಸ್ತುಬದ್ಧ ಉಚಿತ ಶಿಕ್ಷಣ ನೀಡುವ ಅಗತ್ಯವಿದೆ. ಜತೆಗೆ ಮಕ್ಕಳಲ್ಲಿ ಬಾಲ್ಯದಿಂದಲೇ ಉತ್ತಮ ಸಂಸ್ಕಾರದ ಅಡಿಪಾಯ ಹಾಕಬೇಕು. ಯಾವುದೇ ಮೂಲಗಳಿಂದ ಧನಸಹಾಯ ಪಡೆಯದೇ ತಮ್ಮ ಸ್ವಂತ ಹಣದಿಂದ ಉತ್ತಮ ಶಿಕ್ಷಣ ನೀಡುತ್ತಿರುವ ಈ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಶಾಂತೇಶ್ವರ ಟ್ರಸ್ಟ್ ಕಮೀಟಿ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ, ಬಡಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ, ಶಿಕ್ಷಣದ ಮೂಲಕ ದೇಶದ ಅಭಿವೃದ್ಧಿ ಸಾಧ್ಯ ಎಂಬುದನ್ನು ಅರಿತ ಈ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ದಾಫುಗಾಲು ಇಡುತ್ತಿರುವದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಬಂಥನಾಳದ ವೃಷಭಲಿಂಗ ಮಹಾಶಿವಯೋಗಿಗಳು ಸಾನಿಧ್ಯ ವಹಿಸಿ ಮಾತನಾಡಿ, ಸಮಾಜದ ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ಸಿಗುವಂತೆ ಮಾಡಿದ ಬಂಥನಾಳ ಶಿವಯೋಗಿಗಳ ಹಾದಿಯಲ್ಲಿಯೇ ಈ ಸಂಸ್ಥೆ ಸಾಗುತ್ತಿರುವದು ಹೆಮ್ಮೆಯ ವಿಷಯ. ಇನ್ನು ಹೆಮ್ಮರವಾಗಿ ಈ ಸಂಸ್ಥೆಯ ಕಾರ್ಯವೈಖರಿ ವಿಸ್ತರಿಸಲಿ ಎಂದು ಶುಭ ಹಾರೈಸಿದರು.
ಬರಗುಡಿಯ ಸಜ್ಜಾದ-ಎ-ನಶೀನ್ ಹಜರತ್ ನಾಸೀರಜಂಗಸಾಹೇಬ ದರ್ಗಾದ ಮಹಿಬೂಬಸಾಹೇಬ ಇಂಗಳಗಿ, ನಂದ್ರಾಳದ ಸಜ್ಜಾದ-ಎ-ನಶೀನ್ ಬಾಬಡೆಸಾಬ ದರ್ಗಾದ ರಸೂಲಬಾನ ಶೇರಖಾನ ಬಿರಾದಾರ ಸಾನಿಧ್ಯ ವಹಿಸಿ ಮಾತನಾಡಿದರು.
ಬರಗುಡಿಯ ಹ.ನಾ.ದ.ಸಾ.ಶೈ.ಕ್ಷೇ.
ಸಂಘದ ಉಪಾಧ್ಯಕ್ಷ ವೆಂಕಟೇಶ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಹಿಂಗಣಿ ಗ್ರಾಪಂ ಅಧ್ಯಕ್ಷ ಪ್ರಕಾಶ ಪ್ಯಾಟಿ, ಅಹಿರಸಂಗ ಗ್ರಾಪಂ ಅಧ್ಯಕ್ಷ ಶಬಾನಾ ಹಸನ್ ಶೇಖ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮೀತಿ ಅಧ್ಯಕ್ಷ ಅಲಹಾಜ್ ಇಲಿಯಾಸ್ ಅಹಮದ್ ಬೋರಾಮಣಿ, ಬಳ್ಳೊಳ್ಳಿ ಬ್ಲಾಕ್ ಕಾಂಗ್ರೆಸ್ ಕಮೀಟಿ ಅಧ್ಯಕ್ಷ ಕಲ್ಲನಗೌಡ ಬಿರಾದಾರ, ಇಂಡಿ ಬ್ಲಾಕ್ ಕಾಂಗ್ರೆಸ್ ಕಮೀಟಿ ಅಧ್ಯಕ್ಷ ಜಾವೀದ ಮೋಮಿನ, ಬೆಂಗಳೂರಿನ ಆಯುಕ್ತರ ಕಚೇರಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಈರಣ್ಣ ಆಶಾಪುರ, ವಿಜಯಪುರ ಬಿ ಎಲ್ ಡಿ ಇ ಆಸ್ಪತ್ರೆಯ ಹಿರಿಯ ಶಸ್ತ್ರ ಚಿಕಿತ್ಸಕ ಡಾ.ಮಂಜುನಾಥ ಕೋಟೆಣ್ಣವರ, ಇಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ ಎಸ್ ಆಲಗೂರ, ಸೋಮನಿಂಗ ಪಾಟೀಲ, ಹುಸೇನಸಾಬ ಪಟೇಲ ಅವರು ಭಾಗವಹಿಸಿದ್ದರು.
ವಿಜಯಪುರ ಡೈಟ್ ಉಪನ್ಯಾಸಕ ಅಬ್ದುಲ್ ರೆಹಮಾನ್ ಮುಜಾವರ ಸ್ವಾಗತಿಸಿದರು.ಅಶೋಕ ಬಡಿಗೇರ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ನಾನಾಗೌಡ ಬಿರಾದಾರ ಮತ್ತು ದಾದಾ ಶ್ಯಾಮಣ್ಣವರ ನಿರೂಪಿಸಿದರು. ಅಹಿರಸಂಗ ಸರಕಾರಿ ಪ್ರೌಢಶಾಲಾ ಮುಖ್ಯಾಧ್ಯಾಪಕ ಜಯಪ್ರಕಾಶ ಸೊಡ್ಡಗಿ ವಂದಿಸಿದರು. ಲಚ್ಯಾಣ, ಬರಗುಡಿ,ಲೋಣಿ, ಅಹಿರಸಂಗ, ಹಿಂಗಣಿ ಗ್ರಾಮದ ಗ್ರಾಮಸ್ಥರು ಹಾಜರಿದ್ದರು.