ಉತ್ತರ ಪ್ರದೇಶದ ಝಾನ್ಸಿಯ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, 10 ನವಜಾತ ಶಿಶುಗಳು ಸಾವನ್ನಪ್ಪಿದ್ದಾರೆ. 16 ಮಕ್ಕಳು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಮಹಾರಾಣಿ ಲಕ್ಷ್ಮೀ ಬಾಯಿ ವೈದ್ಯಕೀಯ ಕಾಲೇಜಿನ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (ಎನ್‌ಐಸಿಯು) ರಾತ್ರಿ 10:45 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಅವಿನಾಶ್ ಕುಮಾರ್ ಹೇಳಿದ್ದಾರೆ.
ಆಕ್ಸಿಜನ್ ಕಾನ್ಸೆಂಟ್ರೇಟರ್ ಒಳಗೆ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಸಂಭವಿಸಿದೆ ಎಂದು ಹೇಳಲಾಗಿದೆ. ಬೆಂಕಿ ತಗುಲಿದ ತಕ್ಷಣ ಆಸ್ಪತ್ರೆ ಸಿಬ್ಬಂದಿಗಳು ಮಕ್ಕಳನ್ನು ಕಾಪಾಡಲು ಮುಂದಾಗಿದ್ದಾರೆ. NICUನಲ್ಲಿ ಒಟ್ಟು 54 ಮಕ್ಕಳು ದಾಖಲಾಗಿದ್ದರು. ಈ ಬೆಂಕಿ ಅನಾಹುತದಲ್ಲಿ 10 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಇದರಲ್ಲಿ 7 ಮಕ್ಕಳನ್ನು ಪತ್ತೆ ಮಾಡಲಾಗಿದೆ. ಉಳಿದ ಮೂರು ಮಕ್ಕಳು ಯಾರದ್ದೂ ಎಂದು ಇನ್ನೂ ಪತ್ತೆಯಾಗಿಲ್ಲ. ಈ ಕಾರಣಕ್ಕೆ ಮಕ್ಕಳ ಡಿಎನ್‌ಎ ಪರೀಕ್ಷೆ ನಡೆಸಲು ಸೂಚಿಸಲಾಗಿದೆ.
ಇನ್ನು ಸಾವನ್ನಪ್ಪಿರುವ ಶಿಶುಗಳ ಕುಟುಂಬಕ್ಕೆ ಸರ್ಕಾರ ಪರಿಹಾರ ಧನವನ್ನು ನೀಡುವುದಾಗಿ ಕೂಡ ಘೋಷಣೆ ಮಾಡಿದೆ. ಇನ್ನು ಈ ಘಟನೆಯ ಬಗ್ಗೆ ವಿಡಿಯೋ ಒಂದು ಕೂಡ ವೈರಲ್ ಆಗಿದೆ, ಅದರಲ್ಲಿ ರೋಗಿಗಳು ಭಯಗೊಂಡಿರುವುದನ್ನು ಹಾಗೂ ಆಸ್ಪತ್ರೆಯ ವಸ್ತುಗಳು ಸುಟ್ಟು ಭಸ್ಮ ಆಗಿರುವುದನ್ನು ಕಾಣಬಹುದು.