ಲಕ್ನೋ: ಉತ್ತರ ಪ್ರದೇಶದಲ್ಲಿ ಉಪಚುನಾವಣೆಗೆ ಮುನ್ನ ಆಡಳಿತಾತ್ಮಕ ವಿಷಯದಲ್ಲಿ ಮಹತ್ವದ ಬದಲಾವಣೆ ನಡೆದಿದೆ. ಕೇಂದ್ರ ಲೋಕಸೇವಾ ಆಯೋಗದ(ಯುಪಿಎಸ್‌ಸಿ) ಸಮಿತಿ ಪ್ರಕ್ರಿಯೆಯನ್ನು ಬೈಪಾಸ್ ಮಾಡಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ, ರಾಜ್ಯದ ಪೊಲೀಸ್ ಮಹಾನಿರ್ದೇಶಕರನ್ನು (ಡಿಜಿಪಿ) ಸ್ವತಂತ್ರವಾಗಿಯೇ ನೇಮಕ ಮಾಡುವ ನಿರ್ಧಾರ ತೆಗೆದುಕೊಂಡಿದೆ.
ಸೋಮವಾರ ನಡೆದ ಸಚಿವ ಸಂಪುಟ ಸಭೆ ಈ ನಿರ್ಧಾರಕ್ಕೆ ಒಪ್ಪಿಗೆ ನೀಡಿತು. ಇದರ ಪರಿಣಾಮವಾಗಿ ಉತ್ತರ ಪ್ರದೇಶ ಸರ್ಕಾರ ಇನ್ನು ಮುಂದೆ ಡಿಜಿಪಿಯನ್ನು ಸ್ವತಂತ್ರ್ಯವಾಗಿ ನೇಮಕ ಮಾಡಲಿದೆ.
ಡಿಜಿಪಿ ಆಯ್ಕೆಗೆ ಹೈಕೋರ್ಟ್ನ ನಿವೃತ್ತ ನ್ಯಾಯಾಮೂರ್ತಿಗಳ ನೇತೃತ್ವದ ಸಮಿತಿಯನ್ನು ಯೋಗಿ ಸರ್ಕಾರ ರಚಿಸಿದೆ. ಈ ಸಮಿತಿಯಲ್ಲಿ ಮುಖ್ಯ ಕಾರ್ಯದರ್ಶಿ, ಯುಪಿಎಸ್‌ಸಿ ನಾಮನಿರ್ದೇಶಿತ ಸದಸ್ಯರು, ಉತ್ತರ ಪ್ರದೇಶ ಲೋಕಸೇವಾ ಆಯೋಗದ ಅಧ್ಯಕ್ಷರು ಅಥವಾ ಅವರ ನಾಮನಿರ್ದೇಶಿತರು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಥವಾ ಪ್ರಧಾನ ಕಾರ್ಯದರ್ಶಿ (ಗೃಹ) ಮತ್ತು ನಿವೃತ್ತ ಡಿಜಿಪಿ ಇರಲಿದ್ದಾರೆ.
ಈ ಬದಲಾವಣೆಯಲ್ಲಿ ಡಿಜಿಪಿ ಹುದ್ದೆಯ ಅವಧಿಯನ್ನು ಎರಡು ವರ್ಷಕ್ಕೆ ನಿಗದಿಪಡಿಸಲಾಗಿದೆ. ಪಂಜಾಬ್ ಬಳಿಕ ಇದೀಗ ಉತ್ತರ ಪ್ರದೇಶ ಡಿಜಿಪಿ ನೇಮಕಾತಿಗೆ ತಮ್ಮದೇ ಆದ ವ್ಯವಸ್ಥೆಯನ್ನು ಜಾರಿಗೆ ತಂದ ಎರಡನೇ ರಾಜ್ಯವಾಗಿದೆ.