ಚಿಕ್ಕೋಡಿ, ಅಕ್ಟೋಬರ್ 31: ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಿದ್ದನ್ನು ವಿರೋಧಿಸಿ ರಾಜ್ಯ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದಾರೆ. ಆದರೆ ವಕ್ಫ್ ಬೋರ್ಡ್ ವಕ್ರ ದೃಷ್ಟಿ ಬಿಜೆಪಿ ನಾಯಕರ ಮೇಲೆಯೇ ಬಿದ್ದಿದೆ. ಮಾಜಿ ಹಜ್ ಮತ್ತು ವಕ್ಫ್ ಬೋರ್ಡ್ ಸಚಿವೆ ಶಶಿಕಲಾ ಜೊಲ್ಲೆ ಕುಟುಂಬಕ್ಕೆ ವಕ್ಫ್ ಬೋರ್ಡ್ ಶಾಕ್ ನೀಡಿದೆ. ಜೊಲ್ಲೆ ದಂಪತಿಯ ಕಿರಿಯ ಪುತ್ರನಿಗೆ ಸೇರಿದ ಜಮೀನಿನ ಪಹಣಿ ಪತ್ರದಲ್ಲಿ “ವಕ್ಫ್ ಆಸ್ತಿ” ಎಂದು ನಮೂದಿಸಲಾಗಿದೆ.
ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ಸರ್ವೆ ನಂಬರ್ 337ರಲ್ಲಿ ಬಸವಪ್ರಭು ಜೊಲ್ಲೆ ಅವರಿಗೆ ಸೇರಿದ 2 ಎಕರೆ 13 ಗುಂಟೆ ಜಮೀನು ಇದೆ. ಈ ಜಮೀನಿನಲ್ಲಿ ಜೊಲ್ಲೆ ಕುಟುಂಬ ತಲ-ತಲಾಂತರಗಳಿಂದ ಉಳಿಮೆ ಮಾಡುತ್ತಾ ಬಂದಿದೆ. ಆದರೆ, 2021ರಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ವಕ್ಫ್ ಬೋರ್ಡ್ ಸಚಿವರಾಗಿದ್ದ ಸಮಯದಲ್ಲೇ ತಮ್ಮ ಕಿರಿಯ ಪುತ್ರ ಬಸವಪ್ರಭು ಅವರಿಗೆ ಸೇರಿದ ಜಮೀನು ಪಹಣಿಯಲ್ಲಿ ವಕ್ಫ್ ಆಸ್ತಿ ಅಂತ ನಮೂದಾಗಿದೆ. ವಕ್ಫ್ ಆಸ್ತಿ ಎಂದು ಉಲ್ಲೇಖಿತ ಪಹಣಿ ಪತ್ರ ನೋಡಿ ಬಸವಪ್ರಭು ಜೊಲ್ಲೆ ದಂಗಾಗಿದ್ದಾರೆ. ಇನ್ನು, ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಈವರೆಗೆ ವಕ್ಫ್ ಬೋರ್ಡ್‌ನಿಂದ ಬಸವಪ್ರಭು ಅವರಿಗೆ ಯಾವುದೇ ನೋಟಿಸ್ ಜಾರಿಯಾಗಿಲ್ಲ.