ಭುವನೇಶ್ವರ: ಡಾನಾ ಚಂಡಮಾರುತದಿಂದ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾರಿ ಮಳೆಯಾಗುತ್ತಿದೆ. ವೇಗದ ಗಾಳಿಯೊಂದಿಗೆ ಬರುತ್ತಿರುವ ಮಳೆಯಿಂದಾಗಿ ಎರಡು ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮರಗಳು ಉರುಳಿದ್ದು, ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದಿದೆ. ಇದರಿಂದ ಅನೇಕ ಮೂಲ ಸೌಕರ್ಯಗಳು ಹಾನಿಯಾಗಿದೆ.
ಒಡಿಶಾದಲ್ಲಿ ಹೆಚ್ಚಿನ ಹಾನಿ ಸಂಭವಿಸದಿದ್ದರೂ ಪಶ್ಚಿಮ ಬಂಗಾಳದಲ್ಲಿ ಚಂಡ ಮಾರುತಕ್ಕೆ ಇಬ್ಬರು ಬಲಿಯಾಗಿದ್ದಾರೆ. ಚಂಡಮಾರುತದಿಂದ ವಾಯುಭಾರ ಕುಸಿದಿದ್ದು, ಗಾಳಿಯು ಪಶ್ಚಿಮಕ್ಕೆ ಹೆಚ್ಚು ಚಲಿಸುತ್ತಿದೆ. ಈ ಹಾನಿಗೊಳಗಾದ ಪ್ರದೇಶದಲ್ಲಿ ಅಧಿಕಾರಿಗಳು ಪರಿಹಾರ ಕ್ರಮವನ್ನು ಯುದ್ದೋಪಾದಿಯಲ್ಲಿ ನಡೆಸಿದ್ದಾರೆ.
ಚಂಡಮಾರುತವೂ ಸಾಗಿದ ಬೆನ್ನಲ್ಲೇ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ತಕ್ಷಣಕ್ಕೆ ರೈಲು ಮತ್ತು ವಿಮಾನ ವ್ಯವಸ್ಥೆ ಕಾರ್ಯಾಚರಣೆ ಪುನರಾರಂಭಿಸಲಾಗಿದೆ. ಚಂಡಮಾರುತದ ಹಾನಿ ಪರಿಣಾಮ ಕುರಿತು ಅಧಿಕಾರಿಗಳು ತಕ್ಷಣಕ್ಕೆ ಕಾರ್ಯ ಪ್ರವೃತ್ತರಾದರು. ಚಂಡ ಮಾರುತವೂ ಧಮ್ರಾ ಮತ್ತು ಭಿತರ್ಕಾನಿಕಾ ನಡುವೆ ಭೂಕುಸಿತಕ್ಕೆ ಕಾರಣವಾಗಿದೆ.