ಧಾರವಾಡ: ರಾಜ್ಯ ಸರ್ಕಾರ ಸರಿಯಾದ ಅಧ್ಯಯನ ಇಲ್ಲದೇ ಪರಿಶಿಷ್ಟರ ಮೀಸಲಾತಿಯನ್ನು ವರ್ಗಿಕರಿಸಬಾರದು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕೊರಮ, ಕೊರಚ, ಭೋವಿ, ಬಂಜಾರಾ, ಭಜಂತ್ರಿ, ಡೊಂಬರ ಮೀಸಲಾತಿ ಸಂರಕ್ಷಣಾ ಹೋರಾಟ ಸಮಿತಿ ಸದಸ್ಯರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪರಿಶಿಷ್ಟ ಸಮುದಾಯಗಳಲ್ಲಿನ ಜಾತಿಗಳ ಮಾಹಿತಿ ಅವೈಜ್ಞಾನಿಕವಾಗಿರುವುದಾಗಿ ಹಿಂದಿನಿಂದ ಹೇಳಿಕೊಂಡು ಬಂದರೂ ರಾಜಕೀಯವಾಗಿ, ಶೈಕ್ಷಣಿಕವಾಗಿ ಸಾಕಷ್ಟು ಲಾಭಗಳನ್ನು ಪಡೆದಿರುವ ಪ್ರಬಲ ಪರಿಶಿಷ್ಟರು ತಮ್ಮ ಬೇರುಗಳನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡು ಮುಂದಡಿ ಇಡುವ ದಿಸೆಯೊಳಗೆ ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಕ್ಕೆ ತರಲು ತಮ್ಮ ರಾಜಕೀಯ ಪ್ರಾಬಲ್ಯವನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಇದೇ ಸಮುದಾಯದಲ್ಲಿನ 99 ಜಾತಿಗಳ ಪರಿಸ್ಥಿಯ ಬಗ್ಗೆ ಕಿಂಚಿತ್ತೂ ಕಾಳಜಿ ತೋರಿಸಿರುವ ಯಾವ ಕುರುಹುಗಳು ಪ್ರಬಲ ಪರಿಶಿಷ್ಟರ ನಡುವಳಿಕೆಯಲ್ಲಿ ಕಾಣುತ್ತಿಲ್ಲ. ರಾಜಕೀಯ ಲಾಭದ ಮೂಲಕ ಎಲ್ಲವನ್ನು ಪಡೆದುಕೊಳ್ಳುವ ಹುನ್ನಾರ, ಇವರ ನಡುವಳಿಕೆಯಿಂದ ವ್ಯಕ್ತವಾಗುತ್ತಿದೆ.
99 ಜಾತಿಗಳಡಿಯಲ್ಲಿ ಬರುವ ಸಮುದಾಯಗಳ ಸಾಮಾಜಿಕ ಸ್ಥಿತಿ, ಶೈಕ್ಷಣಿಕ ಸ್ಥಿತಿ ಮತ್ತು ರಾಜಕೀಯ ಸ್ಥಿತಿಗಳ ಪರಿಕಲ್ಪನೆ ಯಾವ ವರದಿಯಲ್ಲಿಯೂ ವ್ಯಕ್ತವಾಗಿರುವುದಿಲ್ಲ. ಈ ಸಮುದಾಯಗಳು ತಾವು ಈ ದೇಶದ ಪ್ರಜೆಗಳು ಹೌದು ಅಥವಾ ಇಲ್ಲವೋ ಎನ್ನುವ ದುಸ್ಥಿತಿಯನ್ನು ಹೊಂದಿದವರಾಗಿದ್ದಾರೆ. ಇವರ ಈ ಅಳಲನ್ನು ಅರಿಯುವುದು ಹೇಗೆ ಮತ್ತು ಇದಕ್ಕೆ ಪರಿಹಾರ ಒದಗಿಸುವುದು ಹೇಗೆ? ಹೀಗಾಗಿ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಸರಿಯಾದ ಅಧ್ಯಯನ ಇಲ್ಲದೇ ಪರಿಶಿಷ್ಟರ ಮೀಸಲಾತಿಯನ್ನು ವರ್ಗೀಕರಿಸಬಾರದು ಎಂದು ಆಗ್ರಹಿಸಿದರು.