ನರೇಗಾ ಯೋಜನೆಯ ಸದುಪಯೋಗಪಡೆದುಕೊಳ್ಳಿ : ಇಒ ರಮೇಶ ಹೆಡಗೆ
ಬೆಳಗಾವಿ : ತಾಲ್ಲೂಕ ಪಂಚಾಯತ ಕಚೇರಿ ಆವರಣದಲ್ಲಿ ಗುರುವಾರ ಅಕೋಬರ್ 24 ರಂದು *ಉದ್ಯೋಗ ಖಾತರಿ ನಡೆ ಸಬಲತೆಯಡೆಗೆ* ಅಭಿಯಾನದ ನಿಮಿತ್ಯ ಉದ್ಯೋಗ ವಾಹಿನಿ ವಾಹನಕ್ಕೆ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಮೇಶ ಹೆಡಗೆ ಅವರು ಹಸಿರು ನಿಶಾನೆ ತೊರಿಸುವುದರ ಮೂಲಕ ಚಾಲನೆ ನೀಡಿದರು.
ಉದ್ಯೋಗ ವಾಹಿನಿಯು ಬೆಳಗಾವಿ ತಾಲ್ಲೂಕಿನ ಗ್ರಾಮಗಳಿಗೆ ಸಂಚರಿಸಿ ನರೇಗಾ ಯೋಜನೆಯಡಿ ದೊರೆಯುವ ಕೃಷಿ ಹೊಂಡ, ಅಲ್ಪ ಆಳದ ಬಾವಿ ಜಮೀನು ಸಮತಟ್ಟು, ಸೇರಿದಂತೆ ವಿವಿಧ ವೈಯಕ್ತಿಕ ಕಾಮಗಾರಿಗಳ ಕುರಿತು ಪ್ರಚಾರ ಕೈಗೊಳ್ಳಲಿದೆ.
ಈ ವೇಳೆ ಕಾರ್ಯನಿರ್ವಾಹಕ ಅಧಿಕಾರಿಗಳು ಮಾತನಾಡಿ, ತಾಲ್ಲೂಕಿನಲ್ಲಿ *ಉದ್ಯೋಗ ಖಾತರಿ ನಡೆ ಸಬಲತೆಯಡೆಗೆ* ಅಭಿಯಾನ ಪ್ರಾರಂಭವಾಗಿದ್ದು. 57 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಂಗವಾಡಿ, ಗ್ರಂಥಾಲಯ, ನ್ಯಾಯ ಬೆಲೆ ಅಂಗಡಿ, ಹಾಗೂ ಹಾಲಿನ ಕೇಂದ್ರಗಳಲ್ಲಿ ಭೇಡಿಕೆ ಪಟ್ಟಿಯನ್ನು ಸ್ಥಾಪಿಸಿ, ವೈಯಕ್ತಿಕ ಕಾಮಗಾರಿಗಳ ಬೇಡಿಕೆಗಳನ್ನು ಸ್ವೀಕರಿಸಲಾಗುತ್ತಿದೆ ಇದರ ಸದುಪಯೋಗವನ್ನು ಗ್ರಾಮೀಣ ಪ್ರದೇಶದ ಜನರು ಪಡೆದುಕೊಳ್ಳಬೇಕು.
ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ಆದೇಶದ ಮೇರೆಗೆ ಪ್ರತಿ ಗ್ರಾಮ ಪಂಚಾಯಿತಿಯಿಂದ 10 ರಿಂದ 50ರವರೆಗೆ ದನದ ಕೊಟ್ಟಿಗಳನ್ನು ಅರ್ಹಫಲಾನುಭವಿಗಳಿಗೆ ನೀಡಲು ಆದೇಶಿಸಿದ್ದು, ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ದನದ ಕೊಟ್ಟಿಗೆಗಳನ್ನು ಪಡೆದುಕೊಳ್ಳಿ ಎಂದು ಹೇಳಿದರು.
ಪಂಚಗ್ಯಾರಂಟಿ ಯೋಜನೆಯ ತಾಲ್ಲೂಕ ಅಧ್ಯಕ್ಷರಾದ ಬೈರು ಕಾಂಬಳೆ, ಸಹಾಯಕ ನಿರ್ದೇಶಕರಾದ (ಗ್ರಾ.ಉ) ಬಿ.ಡಿ ಕಡೇಮನಿ ತಾಲ್ಲೂಕಾ ಯೋಜನಾಧಿಕಾರಿಗಳಾದ ಎನ್. ಎಸ್. ಹೂಗಾರ, ಡಿಎಸ್ಎಸ್ ನಾಯಕರಾದ ಗುಂಡು ತಳವಾರ ತಾಪಂ ತಾಂತ್ರಿಕ ಸಂಯೋಜಕ ಮುರುಗೇಶ ಯಕ್ಕಂಚಿ ತಾ.ಐಇಸಿ ಸಂಯೋಜಕ ರಮೇಶ ಮಾದರ ಸೇರಿಂದತೆ ತಾಲ್ಲೂಕ ಪಂಚಾಯತ ಸಿಬ್ಬಂದಿಗಳು ವಿವಿಧ ಗ್ರಾಮಗಳ ಅಭಿವೃದ್ಧಿ ಅಧಿಕಾರಿಗಳು ಇದ್ದರು.