ಧಾರವಾಡ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಅತಿವೃಷ್ಟಿಯಿಂದಾಗಿ ಧಾರವಾಡ ಜಿಲ್ಲೆಯ ಅನೇಕ ಕಡೆಗಳಲ್ಲಿ ರೈತರು ಬೆಳೆದ ಈರುಳ್ಳಿ, ಹತ್ತಿ ಸೇರಿದಂತೆ ಇತ್ಯಾದಿ ಬೆಳೆಗಳು ಸಂಪೂರ್ಣ ನಾಶವಾಗಿವೆ.
ಮಂಗಳವಾರ ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ವಿವಿಧ ರೈತರ ಜಮೀನುಗಳಿಗೆ ಭೇಟಿ ನೀಡಿದ ಸಚಿವರು ಮಳೆಯಿಂದ ಹಾನಿಗೀಡಾದ ಬೆಳೆಗಳನ್ನು ಅಧಿಕಾರಿಗಳ ಸಮೇತ ವೀಕ್ಷಣೆ ಮಾಡಿದರು.
ಅಮ್ಮಿನಬಾವಿ ಗ್ರಾಮದ ಈರುಳ್ಳಿ ಹಾಗೂ ಹತ್ತಿ ಹೊಲಕ್ಕೆ ಭೇಟಿ ನೀಡಿದ ಸಚಿವ ಲಾಡ್, ಮಳೆಯಿಂದಾಗಿ ಆದ ಹಾನಿಯನ್ನು ವೀಕ್ಷಿಸಿದರು. ಅಲ್ಲದೇ ಸ್ಥಳೀಯ ರೈತರಿಗೆ ಆದ ನಷ್ಟದ ಬಗ್ಗೆಯೂ ಮಾಹಿತಿ ಪಡೆದುಕೊಂಡರು. ಸ್ವತಃ ತಾವೇ ಕೆಸರಿನಿಂದ ಕೂಡಿದ ಹೊಲಕ್ಕೆ ಹೋಗಿ ಈರುಳ್ಳಿ ಬೆಳೆ ವೀಕ್ಷಣೆ ಮಾಡಿದರು. ಅತಿವೃಷ್ಟಿಯಿಂದಾದ ಹಾನಿ ಬಗ್ಗೆ ಸರ್ಕಾರದ ಗಮನಸೆಳೆದು ಸರಿಯಾದ ರೀತಿಯಲ್ಲಿ ಪರಿಹಾರ ಒದಗಿಸುವ ಭರವಸೆಯನ್ನು ಸಚಿವರು ರೈತರಿಗೆ ನೀಡಿದರು.
ಇನ್ನು ಮಳೆಯಿಂದ ಹಾನಿಗೀಡಾದ ಮನೆಗಳಿಗೂ ಭೇಟಿ ನೀಡಿದ ಸಚಿವರು, ಬಿದ್ದ ಮನೆಗಳನ್ನು ವೀಕ್ಷಿಸಿದರು. ಮನೆ ಕಳೆದುಕೊಂಡ ಸಂತ್ರಸ್ಥರಿಗೆ ಸರ್ಕಾರದಿಂದ ಬರಬೇಕಾದ ಪರಿಹಾರವನ್ನು ಒದಗಿಸುವ ಭರವಸೆಯನ್ನು ಸಚಿವರು ನೀಡಿದರು.
ಸಚಿವರಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪಂಚಾಯ್ತಿ ಸಿಇಓ ಸ್ವರೂಪಾ ಟಿ.ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ ಸೇರಿದಂತೆ ಅನೇಕ ಅಧಿಕಾರಿಗಳು ಸಾಥ್ ನೀಡಿದರು.