ಕೋರ್ಟ್‌ ಕೇಸ್‌ಗಳನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಅಧಿಕಾರಿಗಳೇ ಹೊಣೆ: ಸಚಿವ ಎನ್‌ ಎಸ್‌ ಭೋಸರಾಜು

Ravi Talawar
ಕೋರ್ಟ್‌ ಕೇಸ್‌ಗಳನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಅಧಿಕಾರಿಗಳೇ ಹೊಣೆ: ಸಚಿವ ಎನ್‌ ಎಸ್‌ ಭೋಸರಾಜು
WhatsApp Group Join Now
Telegram Group Join Now

 

– ಅಡ್ವೊಕೇಟ್‌ ಜನರಲ್‌ ಅವರೊಂದಿಗೆ ಸಭೆ

– ಸಣ್ಣ ನೀರಾವರಿ ಇಲಾಖೆಯ ಹಲವಾರು ಪ್ರಕರಣಗಳ ಬಗ್ಗೆ ಚರ್ಚೆ

ಬೆಂಗಳೂರು ಅಕ್ಟೋಬರ್‌ 18: ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸಮರ್ಪಕವಾಗಿ ನಿರ್ವಹಿಸುವುದು ಹಾಗೂ ನ್ಯಾಯಾಲಯಕ್ಕೆ ಅಗತ್ಯ ದಾಖಲೆಗಳನ್ನು ಸರಿಯಾದ ಸಮಯದಲ್ಲಿ ಸಲ್ಲಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಇದನ್ನ ಸಮರ್ಪಕವಾಗಿ ನಿಭಾಯಿಸದೇ ಇದ್ದಲ್ಲಿ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸುವ ನಿಟ್ಟಿನಲ್ಲಿ ಸುತ್ತೋಲೆ ಹೊರಡಿಸುವಂತೆ *ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್‌ ಎಸ್‌ ಭೋಸರಾಜು ಸೂಚನೆ ನೀಡಿದರು*.

 

ಇಂದು ವಿಕಾಸಸೌಧದಲ್ಲಿ ಸಚಿವರಾದ ಎನ್‌ ಎಸ್‌ ಭೋಸರಾಜು ಅವರು ಸಭೆ ನಡೆಸಿ, ಹಲವಾರು ವರ್ಷಗಳಿಂದ ವಿವಿಧ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದೇ ಇರುವಂತಹ ಅನೇಕ ಪ್ರಕರಣಗಳ ಬಗ್ಗೆ ಅಡ್ವೋಕೇಟ್‌ ಜನರಲ್‌ ಅವರೊಂದಿಗೆ ಚರ್ಚಿಸಿದರು. ರೈತರಿಗೆ ಅನ್ಯಾಯವಾಗದಂತೆ ಹಾಗೂ ಸರಕಾರಕ್ಕೆ ಹೊರೆ ಆಗದಂತೆ ಈ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಅಡ್ವೋಕೇಟ್‌ ಜನರಲ್‌ ಅವರಿಂದ ಸಲಹೆಯನ್ನು ಪಡೆದುಕೊಳ್ಳಲಾಯಿತು.

 

ಭೂಸ್ವಾಧೀನ ಪ್ರಕರಣಗಳ ಹೆಚ್ಚು:

ಸಣ್ಣ ನೀರಾವರಿ ಇಲಾಖೆಯಲ್ಲಿ ಭೂಸ್ವಾಧೀನ ಪ್ರಕರಣಗಳು ಹೆಚ್ಚಾಗಿ ಬಾಕಿಯಿವೆ. ಕೆಲವು ಪ್ರಕರಣಗಳಲ್ಲಿ ಸರಿಯಾದ ದಾಖಲೆ ಸಲ್ಲಿಸದೇ ಇರುವ ಕಾರಣ ಹೆಚ್ಚುವರಿ ಹಣ ನೀಡುವ ಪರಿಸ್ಥಿತಿ ಎದುರಾಗಿದೆ. ಈ ಪ್ರಕರಣಗಳಲ್ಲಿ ಸರಿಯಾದ ಸಮಯದಲ್ಲಿ ದಾಖಲೆ ಸಲ್ಲಿಸದೇ ಅಧಿಕಾರಿಗಳು ನಿರ್ಲಕ್ಷವಹಿಸಿರುವುದು ಕಂಡುಬಂದಿದೆ. ಇಂತಹ ಉದಾಸೀನ ಧೋರಣೆಯಿಂದಾಗಿ ಸರಕಾರದ ಬೊಕ್ಕಸಕ್ಕೆ ಹೆಚ್ಚಿನ ಹೊರೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ನ್ಯಾಯಾಲಯದಲ್ಲಿನ ಪ್ರಕರಣಗಳ ಬಗ್ಗೆ ಉದಾಸೀನ ತೋರಿಸುವ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸುವ ನಿಟ್ಟಿನಲ್ಲಿ ಸರಕಾರದಿಂದ ಸುತ್ತೋಲೆಯನ್ನು ಹೊರಡಿಸುವಂತೆ ಸಚಿವರು ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು.

 

ಇನ್ನು ಮುಂದೆ ಹೊಸ ಯೋಜನೆಗಳನ್ನು ಪ್ರಾರಂಭಿಸುವ ಸಮಯದಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರದಲ್ಲಿ ಮುಗಿಸಲು ಆದ್ಯತೆ ನೀಡಬೇಕು. ಒನ್‌ ಟೈಮ್‌ ಸೆಟ್ಲಮೆಂಟ್‌ ಗೇ ಆದ್ಯತೆ ನೀಡಬೇಕು ಹಾಗೂ ಪ್ರಕರಣಗಳು ನ್ಯಾಯಾಲಯಕ್ಕೆ ಹೋಗದಂತೆ ರೈತರಿಗೆ ಶೀಘ್ರದಲ್ಲಿ ಹಣ ಪಾವತಿಸಬೇಕು ಎಂದು ಸಚಿವರು ಸೂಚನೆ ನೀಡಿದರು.

 

ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿಗಳಾದ ರಾಘವನ್‌, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ದಿ ಪ್ರಾಧಿಕಾರದ ನಿರ್ದೇಶಕರಾದ ಬಿ.ಕೆ ಪವಿತ್ರ ಹಾಗೂ ಇಲಾಖೆಯ ಮುಖ್ಯ ಇಂಜಿನೀಯರ್‌ಗಳು ಭಾಗವಹಿಸಿದ್ದರು.

WhatsApp Group Join Now
Telegram Group Join Now
Share This Article