ಸರ್ವರಿಗೂ ಶ್ರೇಯಸ್ಸನ್ನು ಬಯಸುವ ಪಕ್ಷ ಕಾಂಗ್ರೆಸ್‌: ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

Ravi Talawar
ಸರ್ವರಿಗೂ ಶ್ರೇಯಸ್ಸನ್ನು ಬಯಸುವ ಪಕ್ಷ ಕಾಂಗ್ರೆಸ್‌: ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌
WhatsApp Group Join Now
Telegram Group Join Now

ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಸಚಿವರ ಹೇಳಿಕೆ

ಬೆಂಗಳೂರು: ಸರ್ವರಿಗೂ ಶ್ರೇಯಸ್ಸನ್ನು ಬಯಸುವ ಪಕ್ಷ ಕಾಂಗ್ರೆಸ್‌ ಆಗಿದ್ದು, ಇನ್ನಷ್ಟು ಪ್ರಭುದ್ಧ ನಾಯಕರನ್ನು ತಯಾರಿಸುವ ಕಾರ್ಖಾನೆಯಾಗಲಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದ್ದಾರೆ.

 

ಬೆಂಗಳೂರಿನ ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯ ಭಾರತ್‌ ಜೋಡೋ ಸಭಾಂಗಣದಲ್ಲಿ ನಡೆದ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್‌ ನೂತನ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಅವರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪರಿಕಲ್ಪನೆಯೇ ಮಹಿಳಾ ಕಾಂಗ್ರೆಸ್‌ ಆಗಿದ್ದು, ಅವರ ದೂರ ದೃಷ್ಟಿಯ ಫಲವಾಗಿ ಮಹಿಳಾ ಕಾಂಗ್ರೆಸ್‌ ಇಂದು ಸದೃಢವಾಗಿದೆ ಎಂದರು.

 

ಮಾಜಿ ಸಚಿವರಾದ ರಾಣಿ ಸತೀಶ್‌ ಅವರು ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆಯಾಗಿದ್ದಾಗ, ನಾನು ಖಾನಾಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷೆಯಾಗಿ ರಾಜಕೀಯ ಜೀವನ ಶುರು ಮಾಡಿದೆ. ಕಾಂಗ್ರೆಸ್ ಪಕ್ಷ ಸಾಮಾನ್ಯ ಕಾರ್ಯಕರ್ತರಿಗೂ ಅಧಿಕಾರ ನೀಡುತ್ತದೆ ಎಂಬುದಕ್ಕೆ ನಾನೇ ಉದಾಹರಣೆ. ರಾಜ್ಯದ ಅತಿದೊಡ್ಡ ಜಿಲ್ಲೆ ಎನಿಸಿಕೊಂಡಿರುವ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆಯಾಗಿ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಸೇವೆ ಮಾಡುವ ಅವಕಾಶವನ್ನು ಪಕ್ಷ ನೀಡಿತೆಂದು ಸಚಿವರು ಸ್ಮರಿಸಿದರು.

 

ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಮಹಿಳೆಯರಿಗೆ ಹೆಚ್ಚು ಪ್ರಾತಿನಿಧ್ಯ ಸಿಗಬೇಕು ಎನ್ನುವುದು ನನ್ನ ಅಪೇಕ್ಷೆ. ರಾಜಕಾರಣದಲ್ಲಿ ಮಹಿಳೆಯರಿಗೆ ಸಹನೆ ಬೇಕು, ಜನರಲ್ಲಿ ಹಾಗೂ ಕಾರ್ಯಕರ್ತರಲ್ಲಿ ನಮ್ಮ ನಾಯಕತ್ವದ ಗುಣಗಳನ್ನು ಮೂಡಿಸಬೇಕು, ಕೇವಲ ಕಾಟಾಚಾರಕ್ಕಾಗಿ ರಾಜಕೀಯಕ್ಕೆ ಯಾರೂ ಬರಬಾರದು. ನಾನು ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆಯಾಗಿದ್ದಾಗ ಸೌಮ್ಯಾ ರೆಡ್ಡಿ, ನಯನಾ ಮೋಟಮ್ಮ ನನಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದಾರೆ. ಸೌಮ್ಯ ರೆಡ್ಡಿ ಅವರು ನಾಯಕತ್ವದ ಗುಣವನ್ನು ಹೊಂದಿರುವ ಓರ್ವ ನಾಯಕಿ, ಕೇವಲ ಬೆಂಗಳೂರು, ಜಯನಗರಕ್ಕಷ್ಟೇ ಸೌಮ್ಯಾ ರೆಡ್ಡಿ ಸೀಮಿತವಾಗಿಲ್ಲ, ರಾಜ್ಯಾದ್ಯಂತ ಚಿರಪರಿಚತರಾಗಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ತುಂಬುವ ಕೆಲಸವನ್ನು ಸೌಮ್ಯ ರೆಡ್ಡಿ ನೇತೃತ್ವದ ಮಹಿಳಾ ಕಾಂಗ್ರೆಸ್ ಮಾಡಲಿ ಎಂದು ಹಾರೈಸುತ್ತೇನೆ ಎಂದರು.

 

ಕೋವಿಡ್‌ ಸಮಯದಲ್ಲಿ ಡಿ.ಕೆ.ಶಿವಕುಮಾರ್‌ ಅಧ್ಯಕ್ಷ ಸ್ಥಾನದ ಪದಗ್ರಹಣ ಸಮಾರಂಭಕ್ಕೆ ಬಿಜೆಪಿ ಸರ್ಕಾರ ಅಡ್ಡಿಪಡಿಸಿತು. ಎಷ್ಟೇ ಕಿರುಕುಳ ನೀಡಿದರೂ ಯಾವುದೇ ಬೆದರಿಕೆಗೂ ಜಗ್ಗದ ಅವರು ಪಕ್ಷವನ್ನು ಸಂಘಟಿಸಿದರು. ಬೂತ್‌ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲು ರಾಜ್ಯಾದ್ಯಂತ ಸಂಚರಿಸಿದರು. ಇಂದು ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿರಲು ಅವರೇ ಪ್ರಮುಖ ಕಾರಣ ಎಂದು ಸಚಿವರು ತಿಳಿಸಿದರು.

 

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ಅವರನ್ನು ಪಕ್ಷದ ಸಂಘಟನೆ ವಿಚಾರದಲ್ಲಿ ತೃಪ್ತಿಪಡಿಸುವುದು ಬಹಳ ಕಷ್ಟಕರ. ಗ್ರಾಮ ಮಟ್ಟದ ಕಾರ್ಯಕರ್ತರಿಂದ ಹಿಡಿದು ಪ್ರಭಾವಿ ನಾಯಕರವರೆಗೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಮನೋಭಾವ ಅವರದು. ಸದಾ ಪಕ್ಷಕ್ಕಾಗಿ ತಮ್ಮನ್ನೇ ತಾವು ತೊಡಗಿಸಿಕೊಂಡಿರುವುದು ನಮ್ಮೆಲ್ಲರಿಗೂ ಹೆಮ್ಮೆ ಎನಿಸುತ್ತದೆ ಎಂದರು.

 

ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚು ಪ್ರಾತಿನಿಧ್ಯ ಸಿಗುವಂತೆ ಮಾಡಿದ್ದು ಕೂಡ ಕಾಂಗ್ರೆಸ್ ಪಕ್ಷ. ದೇಶದಲ್ಲಿ ಮಹಿಳಾ ಮೀಸಲಾತಿ ಬಗ್ಗೆ ಮೊದಲಿಗೆ ಧ್ವನಿ ಎತ್ತಿದ್ದೇ ನಮ್ಮ ಪಕ್ಷ. ಕಳೆದ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಸ್ಪರ್ಧಿಸಲು 6 ಮಹಿಳೆಯರಿಗೆ ಅವಕಾಶ ನೀಡಿತ್ತು. ಬೇರೆ ಪಕ್ಷಗಳಲ್ಲಿ ಮಹಿಳೆಯರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಅವಕಾಶ ಸಿಗುವುದಿಲ್ಲ. ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚು ಪ್ರಾತಿನಿಧ್ಯ ಸಿಗುವಂತೆ ಮಾಡಿದ್ದು ಕೂಡ ಕಾಂಗ್ರೆಸ್ ಪಕ್ಷ. ನಮ್ಮ ಸರ್ಕಾರ ಐದು ವರ್ಷಗಳ ಕಾಲ ಸುಭದ್ರವಾಗಿದ್ದು, ಮುಂದಿನ 2028ರ ಚುನಾವಣೆಯಲ್ಲೂ ಕಾಂಗ್ರೆಸ್‌ ಪಕ್ಷವೇ ಅಧಿಕಾರಕ್ಕೆ ಬರಲಿ ಎಂದು ಹಾರೈಸುತ್ತೇನೆ ಎಂದು ಸಚಿವರು ಹೇಳಿದರು.

 

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಅಲ್ಕಾ ಲಂಬಾ, ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ರಾಜ್ಯಸಭಾ ಸದಸ್ಯರಾದ ಜಿ.ಸಿ.ಚಂದ್ರಶೇಖರ್‌, ವಿಧಾನ ಪರಿಷತ್‌ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಶಾಸಕರಾದ ಎನ್‌.ಎ.ಹ್ಯಾರಿಸ್‌, ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ್‌ ಪಟ್ಟಣ್‌, ಶಾಸಕಿ ನಯನಾ ಮೋಟಮ್ಮ, ಮಾಜಿ ಸಚಿವರಾದ ರಾಣಿ ಸತೀಶ್‌, ಮೋಟಮ್ಮ ಮಾಜಿ ಅಧ್ಯಕ್ಷರಾದ ಪುಷ್ಪ ಅಮರ್‌ನಾಥ್‌, ಮಂಜುಳಾ ನಾಯ್ಡು, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪದ್ಮಾವತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article