ಹಾಸನ, ಅಕ್ಟೋಬರ್ 17: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹಾಸನದಲ್ಲಿ ಕೋಟಿ ಕೋಟಿ ರೂಪಾಯಿ ಹಣ ಹಂಚಿಕೆ ಮಾಡಿದ್ದಕ್ಕೆ ಸಂಬಂಧಿಸಿದ್ದು ಎನ್ನಲಾದ, ಅರಸೀಕೆರೆ ಶಾಸಕ ಶಿವಲಿಂಗೇಗೌಡರದ್ದು ಎನ್ನಲಾದ ಆಡಿಯೊ ವೈರಲ್ ಆಗಿದೆ. ಚುನಾವಣೆ ನಡೆದು ನಾಲ್ಕು ತಿಂಗಳ ಬಳಿಕ ಆಡಿಯೋ ವೈರಲ್ ಆಗಿದೆ.
ಶಿವಲಿಂಗೇಗೌಡರದ್ದು ಎನ್ನಲಾಗುತ್ತಿರುವ ಆಡಿಯೋದಲ್ಲಿ, ಸಿಎಂ, ಡಿಸಿಎಂ ಸೂಚನೆಯಂತೆ ಹಣ ಹಂಚಬೇಕು ಎಂದು ಹೇಳಲಾಗಿದೆ. ಒಟ್ಟು ಏಳು ಕೋಟಿ ಹಣ ಹಂಚಿಕೆಯ ಬಗ್ಗೆ ಮಾತನಾಡಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಐದು ಕೋಟಿ ಕೊಡುತ್ತಾರೆ. ಮಾಜಿ ಎಂಎಲ್ಸಿ ಗೋಪಾಲಸ್ವಾಮಿ ಒಂದು ಕೋಟಿ, ನಾನು ಒಂದು ಕೋಟಿ ಕೊಡುತ್ತೇನೆ. ಒಟ್ಟು ಏಳು ಕೋಟಿ ಹಂಚಿಕೆ ಆಗಬೇಕು ಎಂದು ಮಾತನಾಡಿರುವುದು ಆಡಿಯೋದಲ್ಲಿದೆ. ಶಿವಲಿಂಗೇಗೌಡ ತಮ್ಮ ಪಕ್ಷದ ಮುಖಂಡರ ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಇದು ಎನ್ನಲಾಗುತ್ತಿದೆ.
ಪ್ರತಿ ಓಟಿಗೆ ಐದು ನೂರು ರೂಪಾಯಿ ಕೊಡಬೇಕು. ಒಟ್ಟು ಶೇಕಡಾ 68 ರಿಂದ 70 ಜನರಿಗೆ ಹಣ ಕೊಡಿ. ಯಾರು ನಮಗೆ ಓಟ್ ಹಾಕುತ್ತಾರೆ ಎಂಬುದು ಗೊತ್ತಿರುತ್ತೆ, ಅವರಿಗೆ ಕೊಡಿ. ಅವರು 30 ಪರ್ಸೆಂಟ್ ಮತ ತಗೊತಾರೆ ಅವರಿಗೆ ಕೊಡೋದು ಬೇಡ. ಸಿಎಂ, ಡಿಸಿಎಂ, ಉಸ್ತುವಾರಿ ಅವರೇ ತೀರ್ಮಾನ ಮಾಡಿದ್ದಾರೆ, ಅದರಂತೆ ಹಂಚಲಿ. ಶಿವರಾಂ ಅವರು ಮನೆಗೊಂದು ಸಾವಿರ ಕೊಡುತ್ತಾ ಇದ್ದಾರಂತೆ. ಅವರ ಶಿಷ್ಯನೇ ಹೇಳಿದ್ದಾರೆ, ಅವರು ಐದು ನೂರು ರೂಪಾಯಿ ಕೊಟ್ಟಿದಾರೆ ಎಂಬುದಾಗಿ. ನಾವೂ ಒಂದು ಓಟ್ಗೆ 500 ರೂ. ಕೊಡಬೇಕು ಎಂದಿರುವುದು ಆಡಿಯೋದಲ್ಲಿದೆ.