ಬೆಳಗಾವಿ: ಬೆಳಗಾವಿಯಲ್ಲಿ ಉದ್ಯಮಿಯ ಸಾವು ಪ್ರಕರಣ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಸ್ವತಃ ಮಗಳೇ ತನ್ನ ತಂದೆಯದ್ದು ಸಹಜ ಸಾವಲ್ಲ, ತಾಯಿಯೇ ಕೊಲೆ ಮಾಡಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಹಾಗಾಗಿ, ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಅಂತ್ಯಕ್ರಿಯೆ ಮಾಡಿದ್ದ ವ್ಯಕ್ತಿಯ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಅ.9ರಂದು ಬೆಳಗಾವಿಯ ಆಂಜನೇಯ ನಗರದ ನಿವಾಸಿ ಸಂತೋಷ್ ಪದ್ಮಣ್ಣವರ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇದು ಸಹಜ ಸಾವು ಎಂದು ಮರುದಿನ ಸದಾಶಿವ ನಗರದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಅ.15ರಂದು ಸಂತೋಷ್ ಅವರ ಪುತ್ರಿ ಸಂಜನಾ ಮಾಳಮಾರುತಿ ಪೊಲೀಸ್ ಠಾಣೆಗೆ ತೆರಳಿ, ತಂದೆಯ ಸಾವಿನ ಬಗ್ಗೆ ಅನುಮಾನವಿದೆ. ಸೂಕ್ತ ತನಿಖೆ ನಡೆಸುವಂತೆ ದೂರು ನೀಡಿದ್ದಾರೆ.
ಘಟನೆಗೂ ಮುನ್ನ ಮನೆಗೆ ಯಾರೆಲ್ಲ ಬಂದಿದ್ದರೆಂದು ಸಿಸಿಟಿವಿ ಪರಿಶೀಲನೆ ಮಾಡಲಾಗಿದ್ದು, ಈ ವೇಳೆ ಕೆಲವು ದೃಶ್ಯಗಳನ್ನು ಡಿಲೀಟ್ ಮಾಡಿರುವ ಅನುಮಾನ ವ್ಯಕ್ತಪಡಿಸಿ ಸಂಜನಾ ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದರು.
ಸಂತೋಷ್ ಅವರ ಪತ್ನಿ ಉಮಾ ಪದ್ಮಣ್ಣವರ, ಬೆಳಗಾವಿ ನಗರದ ಶೋಭಿತಗೌಡ ಹಾಗೂ ಪದ್ಮಣ್ಣವರ ಮನೆ ಕೆಲಸ ಮಾಡುತ್ತಿದ್ದ ನಂದಾ ಕುರಿಯಾ, ಪ್ರಕಾಶ ಕುರಿಯಾ ಮತ್ತು ಇನ್ನೋರ್ವ ಅಪರಿಚಿತ ಸೇರಿ ಒಟ್ಟು ಐವರು ಆರೋಪಿಗಳ ವಿರುದ್ಧ ಕೇಸು ದಾಖಲಾಗಿದೆ.
ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಪ್ರತಿಕ್ರಿಯಿಸಿ, “ಅ.9ರಂದು ನಮ್ಮ ಮನೆಯಲ್ಲಿ ಕೊಲೆಯಾಗಿದೆ ಎಂದು ಮೃತರ ಪುತ್ರಿ ಸಂಜನಾ ಎಂಬವರು ಮಾಳಮಾರುತಿ ಠಾಣೆಯಲ್ಲಿ ದೂರು ನೀಡಿದ್ದಾರೆ. ತಮ್ಮ ತಾಯಿ ಮತ್ತು ನಾಲ್ವರು ಆರೋಪಿಗಳ ವಿರುದ್ಧ ಅವರು ದೂರು ದಾಖಲಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಡಿಲೀಟ್ ಮಾಡಲಾಗಿದೆ. ಮನೆಯಿಂದ ಇಬ್ಬರು ಹೊರ ಹೋಗಿರುವ ದೃಶ್ಯ ಲಭ್ಯವಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವೇ ಸತ್ಯಾಂಶ ತಿಳಿಯಲಿದೆ. ಸದ್ಯಕ್ಕೆ ಯಾವ ಆರೋಪಿಗಳನ್ನೂ ವಶಕ್ಕೆ ಪಡೆದಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ” ಎಂದರು.