ಕರ್ನಾಟಕದ ಶ್ರೇಷ್ಠ ಇಲಿಜಾರೋ ತಜ್ಞ; ಡಾ. ಸತೀಶ್ ನೇಸರಿ

Ravi Talawar
ಕರ್ನಾಟಕದ ಶ್ರೇಷ್ಠ ಇಲಿಜಾರೋ ತಜ್ಞ; ಡಾ. ಸತೀಶ್ ನೇಸರಿ
WhatsApp Group Join Now
Telegram Group Join Now

 

ಇಲಿಜಾರೋ (ILIZAROV) ಶಸ್ತ್ರಚಿಕಿತ್ಸೆ ರಷ್ಯಾ ದೇಶದ ತಂತ್ರಜ್ಞಾನ. ಹುಟ್ಟಿನಿಂದ ಅಂಗವಿಕಲತೆ ಹೊಂದಿರುವ ಮಕ್ಕಳ ಕೈ ಮತ್ತು ಕಾಲುಗಳ ಮೂಳೆ ಹಾಗೂ ಮಾಂಸಖಂಡಗಳನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಸರಿಪಡಿಸುವ ಆಧುನಿಕ ತಂತ್ರಜ್ಞಾನವೇ ಇಲಿಜಾರೋ ಶಸ್ತ್ರಚಿಕಿತ್ಸೆ. ಈ ತಂತ್ರಜ್ಞಾನವನ್ನು ಹೊಂದಿರುವ ಕರ್ನಾಟಕದ ಏಕೈಕ ಶ್ರೇಷ್ಠ ತಜ್ಞರೆಂದರೆ ಡಾ. ಸತೀಶ ನೇಸರಿ. ಇವರು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಬೆಳಗಾವಿಯ ಎಲುಬು ಮತ್ತು ಕೀಲು ವಿಭಾಗದ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಸುತ್ತಿದ್ದಾರೆ.

ಬಿಮ್ಸ್ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವಾಗ ಈ ಆಸ್ಪತ್ರೆಯಲ್ಲಿ ಎಲುಬಿಗೆ ಕೀವು ಆಗಿರುವ ಪ್ರಕರಣಗಳು, ಮೂಳೆ ಮುರಿದಾಗ ಶಸ್ತ್ರಚಿಕಿತ್ಸೆ ಮಾಡಿದ ನಂತರವೂ ಆ ಮೂಳೆಗಳು ಸರಿಯಾಗಿ ಕೂಡದೇ ಇರುವ ಪ್ರಕರಣಗಳು, ಶಸ್ತ್ರಚಿಕಿತ್ಸೆ ಮಾಡಿದ ನಂತರ ಮೂಳೆ ಡೊಂಕಾಗಿ ಕುಳಿತಿರುವ ಪ್ರಕರಣಗಳು, ಶಸ್ತ್ರಚಿಕಿತ್ಸೆ ಮಾಡಿದ ನಂತರ ಕಾಲು ಕಿರಿದಾಗಿರುವ ಪ್ರಕರಣಗಳು, ಮೊನಕಾಲು ಚಿಪ್ಪು ಬದಲಾವಣೆ ಮಾಡಿದ ನಂತರ ಸರಿ ಹೊಂದದೇ ಇರುವ ಪ್ರಕರಣಗಳು ಇವರ ಗಮನಕ್ಕೆ ಬರುತ್ತಿದ್ದವು. ಈ ಎಲ್ಲ ಪ್ರಕರಣಗಳಿಗೆ ಯಾವ ರೀತಿಯಾಗಿ ರೋಗಿಗೆ ಚಿಕಿತ್ಸೆ ನೀಡಬೇಕು. ಅವರನ್ನು ಹೇಗೆ ಗುಣಮುಖರನ್ನಾಗಿ ಮಾಡಬೇಕು, ಅವರೂ ಸಹ ನಮ್ಮಂತೆಯೇ ಹೇಗೆ ಬದುಕಬೇಕು ಎಂಬ ಪ್ರಶ್ನೆಗಳು ಈ ರೋಗಿಗಳನ್ನು ನೋಡಿದಾಗ ಡಾ. ಸತೀಶ ನೇಸರಿ ಅವರ ಮನದಲ್ಲಿ ಮನೆ ಮಾಡುತ್ತಿದ್ದವು. ಈ ಸಮಯದಲ್ಲಿ ಅವರಿಗೆ ಹೊಳೆದದ್ದೇ ನೂತನ ಇಲಿಜಾರೋ ಸರ್ಜರಿ ತಂತ್ರಜ್ಞಾನ. ಈ ತಂತ್ರಜ್ಞಾನದ ಬಗ್ಗೆ 2008 ರಲ್ಲಿ ಹೆಚ್ಚು ಆಸಕ್ತರಾಗಿ ಈ ಕುರಿತು ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಬೇಕೆಂಬ ಮನೋಭಿಲಾಸೆ ಉಂಟಾಯಿತು.

ಭಾರತ ದೇಶದಲ್ಲಿ ಇಲಿಜಾರೋ ಶಸ್ತ್ರಚಿಕಿತ್ಸೆ ಮಾಡುವ ಏಕೈಕ ಪ್ರಸಿದ್ಧ ತಜ್ಞರೆಂದರೆ ಡಾ. ಮಿಲಿಂದ ಚೌಧರಿ. ರಷ್ಯಾ ದೇಶದಿಂದ ಭಾರತ ದೇಶಕ್ಕೆ ಈ ತಂತ್ರಜ್ಞಾನವನ್ನು ತಂದ ಕೀರ್ತಿ ಈ ಮಹಾನ್ ವೈದ್ಯರಿಗೆ ಸಲ್ಲುತ್ತದೆ. ಈ ತಂತ್ರಜ್ಞಾನವನ್ನು ಎಲ್ಲಿಂದ ಕಲಿಯಬೇಕು ಎನ್ನುವ ವಿಷಯವನ್ನು ಅರಸುತ್ತ ಹೋದಾಗ, ಡಾ ಸತೀಶ ನೇಸರಿ ಅವರಿಗೆ ದೊರೆತ ಅದ್ಭುತ ವೈದ್ಯರೆಂದರೆ ಡಾ. ಮಿಲಿಂದ ಚೌಧರಿ. ಇವರಿಂದ ವಿಷಯಾಸಕ್ತರಾಗಿ ಈ ತಂತ್ರಜ್ಞಾನವನ್ನು ಕಲಿಯಬೇಕೆಂಬ ಮಹದಾಸೆಯಿಂದ ಡಾ. ಮಿಲಿಂದ ಚೌಧರಿ ಆಸ್ಪತ್ರೆ ಅಕೋಲಾ ಮಹಾರಾಷ್ಟ್ರ ರಾಜ್ಯದಲ್ಲಿ 6 ತಿಂಗಳುಗಳ ಫೆಲ್ಲೋಶಿಪ್ ಪದವಿಯನ್ನು 2010 ರಲ್ಲಿ ಪಡೆದರು. ಇಲಿಜಾರೋ ಶಸ್ತ್ರಚಿಕಿತ್ಸೆಯಲ್ಲಿ ಇನ್ನು ಹೆಚ್ಚಿನ ವ್ಯಾಸಂಗ ಮಾಡಬೇಕು, ಪರಿಪೂರ್ಣವಾಗಿ ಅರ್ಥೈಸಿಕೊಳ್ಳಬೇಕೆಂಬ ಇಚ್ಚೆ ಅವರದು. ಅದಕ್ಕಾಗಿ 2014 ರಲ್ಲಿ DEFORMITY CORRECTION ಶಸ್ತ್ರಚಿಕಿತ್ಸೆ ಅಧ್ಯಯನವನ್ನು ಚೀನಾ ದೇಶದಲ್ಲಿ ಪೂರ್ಣಗೊಳಿಸಿದರು. ಇಲಿಜಾರೋ ತಂತ್ರಜ್ಞಾನವನ್ನು ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿಗೆ ಬಿಮ್ಸ್ ಸಂಸ್ಥೆಗೆ ತಂದ ಶ್ರೇಯಸ್ಸು ಡಾ. ಸತೀಶ ನೇಸರಿ ಅವರಿಗೆ ಸಲ್ಲುತ್ತದೆ ಎಂದು ಹೇಳಲು ನನಗೆ ಹೆಮ್ಮೆ ಅನಿಸುತ್ತದೆ.

ಡಾ. ಸತೀಶ ನೇಸರಿ ಪ್ರಸಿದ್ಧ ಎಲುಬು ಮತ್ತು ಕೀಲು ಶಸ್ತ್ರಚಿಕಿತ್ಸಕ. ವೈದ್ಯರು ಎಲುಬು ಮತ್ತು ಕೀಲು ಶಸ್ತ್ರಚಿಕಿತ್ಸೆಗಳನ್ನು ಮಾಡಿದಾಗ ಗುಣಮುಖರಾಗದೆ ಇರುವ ರೋಗಿಗಳ ಮೇಲೆ ಈ ನೂತನ ಆಧುನಿಕ ಶಸ್ತ್ರಚಿಕಿತ್ಸೆಯನ್ನು ಪ್ರಯೋಗಿಸಲು ಆರಂಭಿಸಿದರು. ಅಬಾಲರಿಂದ ವೃದ್ಧರವರೆಗೆ ಎಂತಹ ಮೂಳೆ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಸಾಮರ್ಥ್ಯ ಇವರಿಗಿದೆ. ಎಂಥಹ ಕಷ್ಟಕರ ಎಲುಬು ಶಸ್ತ್ರಚಿಕಿತ್ಸೆ ಇದ್ದರೂ ಅದನ್ನು ಧನಾತ್ಮಕವಾಗಿ ತೆಗೆದುಕೊಳ್ಳುವ ಮನಸ್ಥಿತಿ ಇವರಿಗಿದೆ. ರೈಫಲ್ ಶೂಟಿಂಗ್ ನಲ್ಲಿ ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕ ಮುಡಿಗೇರಿಕೊಂಡ ಡಾ. ಸತೀಶ ನೇಸರಿ, ರೋಗಿಯ ದೇಹದಲ್ಲಿ ಕೊಳೆತ ಎಲುಬುಗಳನ್ನು ಬಹುಬೇಗನೆ ಶೂಟ್ ಮಾಡುತ್ತಾರೆ ಎಂಬುದು ಬಹಳ ಜನರಿಗೆ ತಿಳಿದಿಲ್ಲ. ಪೂರಕ ವಿಶಿಷ್ಟ ಮೂಳೆ ಜೋಡಿಸುವ ( BONE TRANSPORT SURGERY) ಶಸ್ತ್ರಚಿಕಿತ್ಸೆಯಲ್ಲಿ ಅಗಾಧ ಪರಿಣಿತಿ ಹೊಂದಿರುವ ಡಾ. ಸತೀಶ ಅವರು, ಅಂತರರಾಷ್ಟ್ರೀಯ ಮಟ್ಟದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೈದ್ಯರಿಗೆ ತರಬೇತಿಯನ್ನೂ ನೀಡುತ್ತಿದ್ದಾರೆ. ವಿಷಯಾಧಾರಿತ ಸಮ್ಮೇಳನದಲ್ಲಿ ಬಂಗಾರದ ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೇ 100ಕ್ಕೂ ಹೆಚ್ಚು ಪೇಪರ ಪ್ರಜಂಟೇಶನಗಳನ್ನು ರಾಜ್ಯ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮಂಡಿಸಿದ್ದಾರೆ.

ಈ ಶಸ್ತ್ರಚಿಕಿತ್ಸೆಯನ್ನು ಮಾಡುತ್ತಾ ಮಾಡುತ್ತಾ ರೋಗಿಗಳು ಗುಣಮುಖರಾಗುತ್ತಾ ಇಂದು ಕರ್ನಾಟಕ ರಾಜ್ಯದಲ್ಲಿಯೇ ಇಲಿಜಾರೋ ತಂತ್ರಜ್ಞಾನದಲ್ಲಿ ಅಂತ್ಯಂತ ಪರಿಣಿತಿ ಹೊಂದಿ ಶ್ರೇಷ್ಠ ಶಸ್ತ್ರಚಿಕಿತ್ಸಕ ತಜ್ಞರಾಗಿ ಹೊರಹೊಮ್ಮಿದ್ದಾರೆ. ಎಷ್ಟೋ ಮಕ್ಕಳು ಹುಟ್ಟಿನಿಂದ ಅಂಗವಿಕಲರಾಗಿರುತ್ತಾರೆ. ಕೈ, ಕಾಲು ಸಾಮಾನ್ಯರಂತೆ ಇರುವುದಿಲ್ಲ. ಶಸ್ತ್ರಚಿಕಿತ್ಸೆಗೆ ಒಳಗಾದಂತಹ ವ್ಯಕ್ತಿಗಳಿಗೆ ಎಲುಬಿನಲ್ಲಿ ಕೀವು ತುಂಬಿ ಜೀವಕ್ಕೆ ಆಪತ್ತು ಉಂಟಾಗುವ ಸಂಭವ ಇರುತ್ತದೆ. ಮೂಳೆ ಮುರಿದ ನಂತರ ಶಸ್ತ್ರಚಿಕಿತ್ಸೆ ಮಾಡಿದ ನಂತರವೂ ಆ ಮೂಳೆ ಸರಿಯಾಗಿ ಕೂಡದೇ ನಿತ್ಯ ಕರ್ಮಗಳನ್ನು ಮಾಡುವುದು ತುಂಬಾ ತೊಂದರೆಯಾಗುತ್ತಿರುತ್ತದೆ. ಶಸ್ತ್ರಚಿಕಿತ್ಸೆ ಮಾಡಿದ ನಂತರ ಮೂಳೆ ಡೊಂಕಾಗಿ ಕುಳಿತು ಜೀವನ ಸಾಗಿಸುವುದು ಪ್ರಯಾಸದಾಯಕವಾಗಿರುತ್ತದೆ. ಶಸ್ತ್ರಚಿಕಿತ್ಸೆ ಮಾಡಿದ ನಂತರ ಕಾಲು ಕಿರಿದಾಗಿ ನಡೆಯಲು ಬರುತ್ತಿರುವುದಿಲ್ಲ. ಮೊನಕಾಲು ಚಿಪ್ಪು ಬದಲಾವಣೆ ಮಾಡಿದ ನಂತರ ಕಾಲು ಮೊದಲಿನಂತೆ ಸರಿ ಆಗಿರುವುದಿಲ್ಲ. ಇಂತಹ ಎಲ್ಲ ರೋಗಿಗಳಿಗೆ ಡಾ. ಸತೀಶ ನೇಸರಿ ಜೀವ ಸಂಜೀವಿನಿಯಾಗಿದ್ದಾರೆ.

ಡಾ. ಸತೀಶ ನೇಸರಿ ವೃತ್ತಿಯಿಂದ ಎಲುಬು ಮತ್ತು ಕೀಲು ತಜ್ಞರು. ಆದರೆ ಪ್ರವೃತ್ತಿಯಿಂದ ರೋಗಿಗಳ ಆರಾಧಕ. ಇಂತಹ ಎಲ್ಲ ರೋಗಿಗಳನ್ನು ಗುಣಮುಖರನ್ನಾಗಿ ಮಾಡಬೇಕು, ಅವರೂ ಸಹ ನಮ್ಮಂತೆಯೇ ಸುಂದರ ಜೀವನ ನಡೆಸಬೇಕು, ಅವರ ಬಾಳು ಸಹ ನಮ್ಮಂತೆ ಬಂಗಾರವಾಗಬೇಕೆಂಬ ಮನದಾಸೆ ಉಳ್ಳವರು, ಮನಸಿನಲ್ಲಿ ಕನಸು ಕಂಡವರು. ಕನಸು ಕಂಡು ನನಸು ಮಾಡಿದವರು. ವೈದ್ಯಕೀಯ ವೃತ್ತಿಯಲ್ಲಿ ರೋಗಿಗಳನ್ನು ಮುಟ್ಟದೆ ಚಿಕಿತ್ಸೆ ನೀಡುತ್ತಿರುವುದು ಹೊಸದೇನಲ್ಲ. ಇಂತಹ ಸಂದರ್ಭಗಳಲ್ಲಿ ಬಡರೋಗಿಗಳನ್ನು ಇವರೇ ಸ್ವ ಇಚ್ಚೆಯಿಂದ ಆಯ್ಕೆ ಮಾಡಿಕೊಂಡು ಬೆಳಗಾವಿಯ ಬಿಮ್ಸ್ ಸಂಸ್ಥೆಯಲ್ಲಿ ಕರೆ ತಂದು ಚಿಕಿತ್ಸೆ ನೀಡುತ್ತಿರುವ ಅಪರೂಪದ ವೈದ್ಯರು. ಯಾರಾದರು ಇಂತಹ ರೋಗಿಗಳು ಬಂದರೆ ಆ ರೋಗಿಗೆ ಚಿಕಿತ್ಸೆ ನೀಡಿ ಶಸ್ತ್ರಚಿಕಿತ್ಸೆ ಸಫಲವಾಗುವವರೆಗೂ ವಿರಮಿಸುವವರಲ್ಲ. ರೋಗಿಗಳ ಖುಷಿಯಲ್ಲಿ ಖುಷಿ, ರೋಗಿಗಳ ಸಂತೋಷದಲ್ಲಿ ಸಂತೋಷ, ರೋಗಿಗಳ ಆನಂದದಲ್ಲಿ ಸಂತಸ ಪಡುವ ಆನಂದದ ಖಣಿ.

 

ಹುಟ್ಟುವಾಗ ದೇವರು ಅಂಗವಿಕಲನಾಗಿ ಹುಟ್ಟಿಸಿದ್ದಾನೆ ಎಂದು ದೇವರಿಗೆ ಶಾಪ ಹಾಕುವವರೇ ಬಹಳಷ್ಟು ಜನ. ಇಂತಹ ಎಲ್ಲ ಮಕ್ಕಳಿಗೆ ಆನಂದದ ಕೂಪವಾದವರೇ ಡಾ. ಸತೀಶ ನೇಸರಿ. ಅವರು ಇಂತಹ ಎಲ್ಲ ಮಕ್ಕಳನ್ನು ಗಮನಿಸಿ ಅವರಿಗೆ ಇಲಿಜಾರೋ ತಂತ್ರಜ್ಞಾನದ ಕುರಿತು ತಿಳುವಳಿಕೆ ಹೇಳಿ ಅವರನ್ನು ಬಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದು ಈ ತಂತ್ರಜ್ಞಾನದ ಮೂಲಕ ಸರ್ಜರಿ ಮಾಡಿ ಅವರಿಗೆ ಹೊಸ ಬಾಳು ಕೊಡುವ ಭಾಗ್ಯದಾತ. ಸಾಮಾನ್ಯವಾಗಿ ವೈದ್ಯರು ಚಿಕಿತ್ಸೆ ನೀಡಿದ ನಂತರ ವೈದ್ಯರಿಗೂ ರೋಗಿಗಳಿಗೂ ಸಂಬಂಧ ಮುಕ್ತಾಯವಾಗುತ್ತದೆ. ಆದರೆ ಈ ತಂತ್ರಜ್ಞಾನದಲ್ಲಿ ನನ್ನ ಸಂಬಂಧ ಶಸ್ತ್ರಚಿಕಿತ್ಸೆ ಮಾಡಿದ ನಂತರ ಮುಕ್ತಾಯವಾಗುವುದಿಲ್ಲ ಬದಲಾಗಿ ಆರಂಭವಾಗುತ್ತದೆ. ಮುಂದೆ ಅವಿನಾಭಾವ ಸಂಬಂಧವಾಗಿ ಮಾರ್ಪಡುತ್ತದೆ. ಇಂತಹ ರೋಗಿಗಳನ್ನು ನೆನೆಸಿಕೊಂಡು ಒಂದು ಕ್ಷಣ ಭಾವುಕರಾಗುತ್ತಾರೆ ಡಾ. ಸತೀಶ ನೇಸರಿಯವರು.

ಮೊದಮೊದಲು ರೋಗಿಗಳಿಗೆ ಚಿಕಿತ್ಸೆ ನೀಡುವುದು ಮಾತ್ರ ನನ್ನ ಕರ್ತವ್ಯ ಎಂದು ಭಾವಿಸಿಕೊಂಡಿದ್ದ ಡಾ. ಸತೀಶ ನೇಸರಿ ಇಲಿಜಾರೋ ತಂತ್ರಜ್ಞಾನದಿಂದ ಚಿಕಿತ್ಸೆ ಹೊರತುಪಡಿಸಿಯೂ ರೋಗಿಗಳೊಂದಿಗೆ ಇನ್ನೊಂದು ಸುಂದರ ಪ್ರಪಂಚವಿದೆ ಅದುವೇ ರೋಗಿಗಳಿಗೂ ಹಾಗೂ ವೈದ್ಯರಿಗೂ ಇರುವ ಅವಿನಾಭಾವ ಸಂಬಂಧ ಎಂದು ಅರಿವಾದದ್ದೇ ನನ್ನ ಗುರುಗಳಾದ ಡಾ. ಮಿಲಿಂದ ಚೌಧರಿ ಹಾಗೂ ಚೀನಾ ದೇಶದ ಡಾ. ಚಿನ್ ಸಿಹಿ ಎಂಬ ಶ್ರೇಷ್ಠ ವೈದ್ಯರಿಂದ ಎಂದು ಹೇಳುವಾಗ ಗುರುಗಳನ್ನು ಮನದಲ್ಲಿ ನೆನಪಿಸಿಕೊಂಡು ಮತ್ತೊಂದು ಕ್ಷಣ ಭಾವುಕರಾಗುತ್ತಾರೆ. ಇದು ಅವರು ಗುರುಗಳ ಬಗ್ಗೆ ಹೊಂದಿರುವ ಅಪಾರ ಗೌರವವನ್ನು ಸೂಚಿಸುತ್ತದೆ.

ಕಳೆದ 15 ವರ್ಷಗಳಿಂದ ಈ ತಂತ್ರಜ್ಞಾನದಲ್ಲಿ ಸೇವೆ ಸಲ್ಲಿಸುತ್ತಿರುವ ಈ ವೈದ್ಯರು ಇಂತಹ 4000 ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಸುಮಾರು ಜನರಿಗೆ ಚಿಕಿತ್ಸೆ ನೀಡಿದ ನಂತರ ಅವರು ತಮ್ಮ ಜೀವನ ಹೇಗೆ ಕಟ್ಟಿಕೊಂಡಿದ್ದಾರೆ ಎನ್ನುವುದನ್ನೂ ಸಹ ಅಧ್ಯಯನ ಮಾಡಿದ್ದೇನೆ. ಅವರು ಕಟ್ಟಿಕೊಂಡ ಸುಂದರ ಜೀವನ ನೋಡಿದಾಕ್ಷಣ ನನ್ನ ವೃತ್ತಿ ಸಾರ್ಥಕವಾಯಿತು ಎಂಬ ಭಾವ ನನ್ನಲ್ಲಿ ನಿರ್ಮಾಣವಾಗುತ್ತದೆ. ಅದುವೇ ನನ್ನ ಜೀವನದ ಆನಂದದ ಕ್ಷಣವಾಗಿ ಮಾರ್ಪಡುತ್ತದೆ. ವೃತ್ತಿಯ ಸಾರ್ಥಕತೆಯೆಂದರೆ ಏನು ಎನ್ನುವುದನ್ನು ಈ ಇಲಿಜಾರೋ ತಂತ್ರಜ್ಞಾನದ ಮೂಲಕ ರೋಗಿಗಳಿಗೆ ಚಿಕಿತ್ಸೆ ನೀಡುವುದರಲ್ಲಿ ಕಂಡುಕೊಂಡಿದ್ದೇನೆ ಎಂದು ತುಂಬಾ ಹೆಮ್ಮೆಯಿಂದ ಮಾತನಾಡುತ್ತಾರೆ. ಬಹಳಷ್ಟು ರೋಗಿಗಳು ಗುಣಮುಖರಾದ ನಂತರ ಅವರು ಮಾಡುವ ಉದ್ಯೋಗದ ಮೊದಲ ಲಾಭವನ್ನು ನನಗೆ ಕೊಟ್ಟು ಸಂತೋಷ ಪಡುತ್ತಾರೆ.

ಜಗತ್ತಿನಲ್ಲಿ ಬಹಳಷ್ಟು ವೃತ್ತಿಗಳು ಇವೆ. ಯಾವ ವೃತ್ತಿಯಲ್ಲಿಯೂ ತೃಪ್ತಿ ಸಿಗುತ್ತಿಲ್ಲ ಎಂಬ ಕೂಗು ಕೇಳಿಬರುತ್ತಿದೆ. ವೃತ್ತಿಯಲ್ಲಿ ತೃಪ್ತಿ ಬೇಕು. ತೃಪ್ತಿ ಇಲ್ಲದ ವೃತ್ತಿ ಅದು ವೃತ್ತಿ ಅಲ್ಲ ಅದು ಕೇವಲ ವ್ಯವಹಾರ ಮಾತ್ರ. ಡಾ. ಸತೀಶ ನೇಸರಿ ತಮ್ಮ ವೃತ್ತಿಯನ್ನು ವ್ಯವಹಾರವನ್ನಾಗಿ ಪರಿವರ್ತಿಸಬೇಕಾಗಿದ್ದರೆ ಅವರಿಗೆ ಸಾಕಷ್ಟು ಅವಕಾಶಗಳಿದ್ದವು. ಆದರೆ ಅವೆಲ್ಲವುಗಳನ್ನು ಕೈಚೆಲ್ಲಿ ತೃಪ್ತಿಯ ಈ ವೃತ್ತಿಯಲ್ಲಿ ಇಲಿಜಾರೋ ತಂತ್ರಜ್ಞಾನದೊಂದಿಗೆ ತುಂಬಾ ಆನಂದವಾದ ಜೀವನವನ್ನು ಸಾಗಿಸುತ್ತಿದ್ದಾರೆ. ಇಂದು ವೈದ್ಯಕೀಯ ವೃತ್ತಿ ಮಾರಾಟಕ್ಕಿದೆ. ಇಂತಹ ಸಂದಂರ್ಭದಲ್ಲಿಯೂ ಸಹ ವೈದ್ಯಕೀಯ ವೃತ್ತಿಯನ್ನು ಪ್ರೀತಿಸುವಂತಹ ಸಹೃದಯಿ ಡಾ. ಸತೀಶ ನೇಸರಿಯಂತಹ ವೈದ್ಯರಿದ್ದಾರೆ ಎನ್ನುವುದಕ್ಕೆ ನಾವೆಲ್ಲರೂ ಹೆಮ್ಮೆ ಪಡಬೇಕು. ಇಂತಹ ವೈದ್ಯರಿಂದ ವೈದ್ಯಕೀಯ ವೃತ್ತಿಗೆ ಶ್ರೇಷ್ಠತೆ ಲಭಿಸುತ್ತದೆ. ಘನತೆ ಗೌರವಗಳು ಹೆಚ್ಚಾಗುತ್ತವೆ. “ವೈದ್ಯೋ ನಾರಾಯಣೋ ಹರೀ” ಎನ್ನುವ ನಾಣ್ಣುಡಿಗೆ ನಿಜವಾದ ಅರ್ಥ ಬರುತ್ತದೆ.

 

ರೋಗಿಗಳಿಗೆ ಚಿಕಿತ್ಸೆ ನೀಡಿದ ನಂತರ ಅವರು ಸಾಮಾನ್ಯರಂತೆ ಸುಂದರವಾದ ಜೀವನವನ್ನು ಕಟ್ಟಿಕೊಳ್ಳುತ್ತಾರೆ. ತದನಂತರ ಅವರ ಜೀವನದಲ್ಲಿ ಮಾಡುವ ಎಲ್ಲ ಕೆಲಸಗಳನ್ನು ನನಗೆ ಹೇಳಿ ಮಾಡುತ್ತಾರೆ. ಅಮವಾಸ್ಯೆ, ಹಬ್ಬ ಹರಿದಿನಗಳಲ್ಲಿ ಭೋಜನವನ್ನು ತಯಾರಿಸಿ ಮೊದಲು ದೇವರಿಗೆ ಹೇಗೆ ಮೀಸಲಿಡುತ್ತಾರೋ ಹಾಗೆ ಮೊದಲು ನನಗೆ ತಂದು ಕೊಟ್ಟು ತದನಂತರ ಅವರು ತೆಗೆದುಕೊಳ್ಳತ್ತಾರೆ ಎಂದು ಹೇಳುವಾಗ ವೈದ್ಯರಲ್ಲಿ ಧನ್ಯತಾ ಭಾವ ಮನೆ ಮಾಡುತ್ತದೆ. ಈ ಎಲ್ಲ ವಿಚಾರಗಳನ್ನು ಜೀವನದ ಸ್ಪೂರ್ತಿ ಸೆಲೆಯಾದ ಧರ್ಮಪತ್ನಿ ವಿನುತಾ ಹಾಗೂ ಏಕೈಕ ಮಗಳು ಖುಷಿಯೊಂದಿಗೆ ಹಂಚಿಕೊಳ್ಳುವಾಗ ಸಂತಸದ ಭಾವ ಆವಿರ್ಭವಿಸುತ್ತದೆ. ಜೀವನದ ಸಾರ್ಥಕ ಭಾವ ನನ್ನಲ್ಲಿ ಮೂಡುತ್ತದೆ. ವೃತ್ತಿಯ ಬಗ್ಗೆ ನನಗೆ ಗೌರವ ಹೆಚ್ಚಾಗುತ್ತದೆ. ಇನ್ನಷ್ಟು ಇಂತಹ ರೋಗಿಗಳಿಗೆ ಚಿಕಿತ್ಸೆ ನೀಡಬೇಕೆಂಬ ಉತ್ಸಾಹ ಉಂಟಾಗುತ್ತದೆ. ಮುಂದೆ ಬರುವ ರೋಗಿಗಳಿಗೆ ಇನ್ನಷ್ಟು ಆತ್ಮಿಯತೆಯಿಂದ ಚಿಕಿತ್ಸೆ ನೀಡುವ ಮನೋಭಾವ ನಿರ್ಮಾಣವಾಗುತ್ತದೆ ಎಂದು ಅತೀ ಹೆಮ್ಮೆಯಿಂದ ಈ ವಿಚಾರಗಳನ್ನು ಡಾ. ಸತೀಶ ನೇಸರಿಯವರು ನನ್ನೊಂದಿಗೆ ಹಂಚಿಕೊಳ್ಳುತ್ತಾರೆ.

ಬಡರೋಗಿಗಳಿಗೆ ಚಿಕಿತ್ಸೆ ನೀಡುವುದರಲ್ಲಿಯೇ ಪರಮಾನಂದವಿದೆ ಎಂದು ನನ್ನ ಅಜ್ಜಿ ನನಗೆ ಪದೇ ಪದೇ ಹೇಳುತ್ತಿದ್ದರು. ಅವರ ಮಾತಿಗೆ ಬೆಲೆ ಕೊಟ್ಟು ವೈದ್ಯ ವೃತ್ತಿಯನ್ನು ಅರಸಿಕೊಂಡೆ. ಅವರ ಇಚ್ಚೆಯಂತೆ ಬಡರೋಗಿಗಳಿಗೆ ಅಂತ್ಯಂತ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿದ್ದೇನೆ. ದೊಡ್ಡ ದೊಡ್ಡ ಆಸ್ಪತ್ರೆಗಳ ಆಹ್ವಾನವಿದ್ದರೂ ಬಡರೋಗಿಗಳೊಂದಿಗೆ ಬಿಮ್ಸ್ ನಲ್ಲಿಯೇ ಇರಬೇಕೆಂಬ ಛಲ ಡಾ. ಸತೀಶ ನೇಸರಿ ಅವರದು. ಅಜ್ಜಿಯ ಮಹದಾಸೆಯೊಂದಿಗೆ ಆನಂದದ ಸಾಗರವನ್ನೇ ಬಿಮ್ಸ್ ಸಂಸ್ಥೆಯಲ್ಲಿ ನಿರ್ಮಾಣ ಮಾಡಿಕೊಂಡಿದ್ದಾರೆ. ಅವರ ಈ ನಿಸ್ವಾರ್ಥ ಸೇವೆಯನ್ನು ಬಿಮ್ಸ್ ಸಂಸ್ಥೆಯ ಹೆಮ್ಮೆಯ ನಿರ್ದೇಶಕರಾದ ಡಾ. ಅಶೋಕ ಕುಮಾರ ಶೆಟ್ಟಿ ಅವರು ಮನ ತುಂಬಿ ಶ್ಲಾಘಿಸುತ್ತಾರೆ. ಈ ವೈದ್ಯರಿಂದ ನಮ್ಮ ಬಿಮ್ಸ್ ಸಂಸ್ಥೆಗೆ ಮತ್ತೊಂದು ಗರಿ ಮೂಡಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಎಲುಬು ಮತ್ತು ಕೀಲು ವಿಭಾಗದ ನೆಚ್ಚಿನ ವೈದ್ಯರೆಂದರೆ ಡಾ. ಸತೀಶ ನೇಸರಿ ಎಂದು ವಿಭಾಗದ ಮುಖ್ಯಸ್ಥರಾದ ಡಾ. ಪ್ರಕಾಶ ವಾಲಿ ಬಣ್ಣಿಸುತ್ತಾರೆ. ಡಾ. ಸತೀಶ ನೇಸರಿ ನಾ ಕಂಡ ಬಿಮ್ಸ್ ಸಂಸ್ಥೆಯ ಅದ್ಬುತ ವೈದ್ಯರು. ರೋಗಿಗಳೊಂದಿಗೆ ಹಗಲಿರುಳು ಶ್ರಮಿಸುವ ದನಿವರಿಯದ ಶ್ರಮಿಕ. ಅವರ ಸೇವೆ ಹೀಗೆ ಮುಂದುವರೆಯಲಿ. ಇನ್ನಷ್ಟು ಬಡ ರೋಗಿಗಳಿಗೆ ಚಿಕಿತ್ಸೆ ಸಿಗಲಿ. ವೈದ್ಯರ ಶ್ರಮ ಸಾರ್ಥಕವಾಗಲಿ. ರೋಗಿಗಳ ಬಾಳು ಬಂಗಾರವಾಗಲಿ. ರೋಗಿಗಳ ಬಾಳನ್ನು ಬಂಗಾರವಾಗಿಸಿದ ಡಾ. ಸತೀಶ ನೇಸರಿ ಅವರ ಬಾಳು ಬಂಗಾರವಾಗಲಿ.   -ಡಾ. ಸಿದ್ಧುಹುಲ್ಲೋಳಿ ಕೆ.ಎ.ಎಸ್, ಮುಖ್ಯ ಆ೦ಡಳಿತಾಧಿಕಾರಿಗಳು, ಬಿಮ್ಸ್ ಬೆಳಗಾವಿ.

 

 

 

 

 

 

 

WhatsApp Group Join Now
Telegram Group Join Now
Share This Article