ಮಂಗಳೂರು, ಅ.15: ಹರಿಯಾಣದಲ್ಲಿ ಹಗಲುಗನಸು ಕಾಣುತ್ತಿದ್ದ ಕಾಂಗ್ರೆಸ್ ಸೋಲು ಕಂಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ. ಇತ್ತೀಚೆಗೆ ಹರಿಯಾಣ, ಜಮ್ಮು ಕಾಶ್ಮೀರ ಫಲಿತಾಂಶ ನಮಗೆಲ್ಲಾ ತಿಳಿದಿದೆ. ಹರಿಯಾಣದಲ್ಲಿ ಮೂರನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕಾಶ್ಮೀರದಲ್ಲಿ ಬಿಜೆಪಿ ಅಧಿಕೃತ ವಿರೋಧ ಪಕ್ಷವಾಗಿ ನಿಂತಿದೆ. ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತದಾರರು ತಿರಸ್ಕರಿಸಿದ್ದಾರೆ ಎಂದರು.
ಬಂಟ್ವಾಳದಲ್ಲಿ ಹರ್ಯಾಣ ಹಾಗೂ ಜಮ್ಮು ಕಾಶ್ಮೀರ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿದ ಬಿ.ವೈ.ವಿಜಯೇಂದ್ರ, ರಾಜ್ಯದಲ್ಲಿ ‘ಕೈ’ ಒಂದೂವರೆ ವರ್ಷದಲ್ಲೇ ಜನರ ಹಿಡಿಶಾಪಕ್ಕೆ ಒಳಗಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದಲ್ಲಿ ಮುಳುಗಿದೆ. ವಾಲ್ಮೀಕಿ ಹಗರಣದ ಬಗ್ಗೆ ಸಿಎಂ ಸಿದ್ದರಾಮಯ್ಯ ಸದನದಲ್ಲೇ ಒಪ್ಪಿದ್ದಾರೆ. ಮುಡಾ ನಿವೇಶನವನ್ನು ಸಿಎಂ ಸಿದ್ದರಾಮಯ್ಯ ವಾಪಸ್ ನೀಡಿದ್ದಾರೆ. ಸೈಟ್ ಹಿಂಪಡೆದು ಸಿಎಂ ಸಿದ್ದರಾಮಯ್ಯ ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ. ಪಕ್ಷ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದು ಅಭಿವೃದ್ಧಿಗೆ ಹಣ ನೀಡ್ತಿಲ್ಲ. ಪರಿಷತ್ ಉಪಚುನಾವಣೆ ಕ್ಷೇತ್ರವನ್ನು ಹಾಲಿ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಪ್ರತಿನಿಧಿಸುತ್ತಿದ್ದರು. ಹಿಂದುತ್ವದ ಕಟ್ಟಾಳು ಕಿಶೋರ್ ಕುಮಾರ್ ಅವರನ್ನು ಕಣಕ್ಕಿಳಿಸಿದ್ದೇವೆ. ಹಾಗಾಗಿ ಈ ಕ್ಷೇತ್ರದಲ್ಲಿ ದೊಡ್ಡ ಅಂತರದಲ್ಲಿ ಮತ್ತೊಮೆ ಗೆಲ್ಲುತ್ತೇವೆ ಎಂದರು.