ಮೈಸೂರು, ಅಕ್ಟೋಬರ್ 15: ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ 43 ಪ್ರಕರಣಗಳು ದಾಖಲಾಗಿವೆ. ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಸ್ನೇಹಮಯಿ ಕೃಷ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಂಧಿಸಿ ವಿಚಾರ ನಡೆಸುವಂತೆ ಆಗ್ರಹಿಸಿದ್ದಾರೆ. ಪ್ರತಿನಿತ್ಯ ಲೋಕಾಯುಕ್ತ ಕಚೇರಿಗೆ ಭೇಟಿ ನೀಡುತ್ತಿದ್ದಾರೆ. ಅಧಿಕಾರಿಗಳ ವಿರುದ್ಧ ಒತ್ತಡ ಹೇರುತ್ತಿದ್ದಾರೆ. ಬಿಜೆಪಿ ನಾಯಕರ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ ಆರೋಪ ಮಾಡಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು (ಲಕ್ಷ್ಮಣ್) ಪ್ರತಿನಿತ್ಯ ಲೋಕಾಯುಕ್ತಗೆ ಹೋಗುತ್ತಿದ್ದಾರೆಂದು ಆರೋಪಿಸಿದ್ದಾರೆ. ಆದರೆ ನಾನು ಒಮ್ಮೆ ಮಾತ್ರ ಹೋಗಿದ್ದೇನೆ. ಲೋಕಾಯುಕ್ತ ಕಚೇರಿ ಪಕ್ಕದಲ್ಲಿರುವ ಹೋಟೆಲ್ಗೆ ಕಾಫಿ ಕುಡಿಯಲು ಪ್ರತಿನಿತ್ಯ ಹೋಗುತ್ತೇನೆ. ಸ್ನೇಹಮಯಿ ಕೃಷ್ಣ ಓರ್ವ ಬ್ಲಾಕ್ಮೇಲರ್. ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಮಾಧ್ಯಮಗಳ ಮುಂದೆ ಸುಳ್ಳು ಹೇಳಿಕೆಗಳನ್ನು ನೀಡಿ ಪ್ರಚಾರ ಪಡೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಸ್ನೇಹಮಯಿ ಕೃಷ್ಣ ಕೇಂದ್ರ ಸರ್ಕಾರದ ಸೂತ್ರಧಾರರಂತೆ ವರ್ತಿಸುತ್ತಿದ್ದಾರೆ. ಪ್ರಕರಣ ತನಿಖೆಯ ಹಂತದಲ್ಲಿರುವಾಗ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.