ಬೈರುತ್: ಗಾಜಾದಂತೆ ಲೆಬನಾನ್ನಲ್ಲಿ ಇಸ್ರೇಲ್ ವಿಧ್ವಂಸಕಗಳನ್ನು ಸೃಷ್ಟಿಸುತ್ತಿದೆ. ಹಿಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿಕೊಂಡು ಯಹೂದಿ ರಾಷ್ಟ್ರವು ಬಾಂಬ್, ಕ್ಷಿಪಣಿ ದಾಳಿಗಳನ್ನು ಹೆಚ್ಚಿಸಿದೆ. ಇದರಿಂದ ಅಲ್ಲಿನ ಜನಜೀವನವೂ ಅಸ್ತವ್ಯಸ್ತಗೊಂಡಿದ್ದು, ಕಳೆದ ಮೂರು ವಾರಗಳಲ್ಲಿ 4 ಲಕ್ಷಕ್ಕೂ ಅಧಿಕ ಮಕ್ಕಳನ್ನು ಸ್ಥಳಾಂತರಿಸಲಾಗಿದೆ.
ಹಿಜ್ಬುಲ್ಲಾ ಉಗ್ರಗಾಮಿಗಳ ವಿರುದ್ಧ ಇಸ್ರೇಲ್ ಆಕ್ರಮಣವು ಅಪಾಯಕಾರಿಯಾಗಿದೆ. ದಾಳಿ ಪೀಡಿತ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲಾಗಿದೆ. 1.2 ಮಿಲಿಯನ್ ಕುಟುಂಬಗಳು ಆಶ್ರಯ ತಾಣ ಸೇರಿದ್ದಾರೆ. ಇದರಲ್ಲಿ 4 ಲಕ್ಷಕ್ಕೂ ಅಧಿಕ ಮಕ್ಕಳಿದ್ದಾರೆ ಎಂದು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿ (UNICEF) ಅಧಿಕಾರಿಗಳು ತಿಳಿಸಿದ್ದಾರೆ.
ಅದರ ನಿರ್ದೇಶಕ ಟೆಡ್ ಚೈಬನ್ ಅವರು ಆಶ್ರಯ ತಾಣಗಳಿಗೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಂಡಿದ್ದು, ಈ ದಾಳಿಯು ಅನೇಕ ಮಕ್ಕಳ ಮೇಲೆ ಪರಿಣಾಮ ಬೀರಿದೆ. 1.2 ಮಿಲಿಯನ್ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸಾರ್ವಜನಿಕ ಶಾಲೆಗಳು ಬಂದ್ ಆಗಿವೆ. ಹಲವು ಶಿಕ್ಷಣ ಸಂಸ್ಥೆಗಳೂ ಹಾನಿಗೊಳಗಾಗಿವೆ. ಅದರಲ್ಲೂ ಇಲ್ಲಿನ ವಲಸಿಗರಾದ ಪ್ಯಾಲೆಸ್ಟೈನ್, ಸಿರಿಯಾ ಕುಟುಂಬಗಳು ಹೆಚ್ಚು ನಷ್ಟ ಅನುಭವಿಸುತ್ತಿವೆ ಎಂದು ಹೇಳಿದ್ದಾರೆ.
ಲೆಬನಾನಿನ ಕೆಲವು ಖಾಸಗಿ ಶಾಲೆಗಳು ಇನ್ನೂ ಕಾರ್ಯನಿರ್ವಹಿಸುತ್ತಿವೆ. ಆದರೆ, ಸರ್ಕಾರಿ ಶಾಲೆಗಳು ಬಂದ್ ಆಗಿವೆ. ಆತಂಕಕಾರಿ ವಿಷಯವೆಂದರೆ ಲೆಬನೀಸ್, ಸಿರಿಯನ್, ಪ್ಯಾಲೆಸ್ಟೈನ್ ಮಕ್ಕಳು ತಮ್ಮ ಕಲಿಕೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಚೈಬನ್ ಕಳವಳ ವ್ಯಕ್ತಪಡಿಸಿದರು.
ಆರೋಗ್ಯ ಸಚಿವಾಲಯದ ಪ್ರಕಾರ, ಲೆಬನಾನ್ನಲ್ಲಿ 2,300 ಕ್ಕೂ ಹೆಚ್ಚು ಜನರು ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಅದರಲ್ಲಿ 100 ಕ್ಕೂ ಹೆಚ್ಚು ಮಕ್ಕಳಿದ್ದಾರೆ. 800 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸ್ಥಳಾಂತರಗೊಂಡ ಮಕ್ಕಳನ್ನು ಚಿಕ್ಕದಾದ ಆಶ್ರಯ ತಾಣಗಳಲ್ಲಿ ಕಿಕ್ಕಿರಿದು ತುಂಬಲಾಗಿದೆ. 1 ಸಾವಿರ ಜನರಿಗೆ 12 ಶೌಚಾಲಯಗಳು ಮಾತ್ರ ಇವೆ. ಅನೇಕ ಕುಟುಂಬಗಳು ರಸ್ತೆಗಳ ಉದ್ದಕ್ಕೂ ಅಥವಾ ಕಡಲತೀರಗಳಲ್ಲಿ ಡೇರೆಗಳನ್ನು ಹಾಕಿಕೊಂಡು ಜೀವನ ನಡೆಸುವಂತಾಗಿದೆ ಎಂದು ಮಾಹಿತಿ ನೀಡಿದ್ದಾರೆ.