ಬೆಂಗಳೂರು: ‘ಕುಸುಮ್– ಸಿ’ ಯೋಜನೆಯ ಮೊದಲ ಹಂತದಲ್ಲಿ ಸ್ಥಾಪಿಸುತ್ತಿರುವ ಫೀಡರ್ ಮಟ್ಟದ ಸೋಲಾರ್ ವಿದ್ಯುತ್ ಘಟಕಗಳನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಇಂಧನ ಇಲಾಖೆ ಅಧಿಕಾರಿಗಳಿಗೆ ಸಚಿವ ಕೆ.ಜೆ.ಜಾರ್ಜ್ ಅವರು ಸೋಮವಾರ ಸೂಚನೆ ನೀಡಿದ್ದಾರೆ.
ಬೆಸ್ಕಾಂ ಕೇಂದ್ರ ಕಚೇರಿಯಲ್ಲಿ ಸೋಮವಾರ ನಡೆದ ಕುಸುಮ್ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು ಮಾತನಾಡಿದರು.
ಮುಂದಿನ ಜನವರಿಯಿಂದಲೇ ವಿದ್ಯುತ್ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಇದೆ. ಅದಕ್ಕೆ ಪೂರಕವಾಗಿ ಕುಸುಮ್–ಸಿ ಅಡಿ ಪ್ರಗತಿಯಲ್ಲಿರುವ ಸೌರ ವಿದ್ಯುತ್ ಉತ್ಪಾದನಾ ಘಟಕಗಳನ್ನು ಬೇಗ ಪೂರ್ಣಗೊಳಿಸಿ, ಫೀಡರ್ಗಳಿಗೆ ವಿದ್ಯುತ್ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಕುಸುಮ್ ಸಿ ಯೋಜನೆಯಡಿ ಮೊದಲ ಹಂತದ ಅನುಷ್ಠಾನವನ್ನು ತ್ವರಿತಗೊಳಿಸುವ ಜೊತೆಗೆ, ಎರಡನೇ ಹಂತದ ಯೋಜನೆಗೆ ಟೆಂಡರ್ ಪ್ರಕ್ರಿಯೆಯನ್ನ ತ್ವರಿತವಾಗಿ ಆರಂಭಿಸಬೇಕು ಎಂದು ತಾಕೀತು ಮಾಡಿದರು. ಅಲ್ಲದೇ, ಎಷ್ಟು ಫೀಡರ್ಗಳಿಗೆ ಯಾವ ಪ್ರಮಾಣದಲ್ಲಿ ವಿದ್ಯುತ್ ಪೂರೈಸಲಾಗುತ್ತದೆ ಎಂಬ ಬಗ್ಗೆ ಕೆಪಿಟಿಸಿಎಲ್ಗೆ ಮಾಹಿತಿ ನೀಡಬೇಕು. ಅದರನ್ವಯ, ಅಗತ್ಯಕ್ಕೆ ತಕ್ಕಂತೆ ಸಬ್ಸ್ಟೇಷನ್ಗಳ ಉನ್ನತೀಕರಣಕ್ಕೆ ಕ್ರಮ ವಹಿಸಲಾಗುತ್ತದೆ ಎಂದು ಹೇಳಿದರು.
ಕುಸುಮ್ ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಉಪಕ್ರಮವಾಗಿದ್ದು, ರೈತರ ಇಂಧನ ಅಗತ್ಯಗಳನ್ನು ಪರಿಹರಿಸಲು ಮತ್ತು ಕೃಷಿಯನ್ನು ಹೆಚ್ಚು ಸಮರ್ಥನೀಯವಾಗಿಸಲು ಪ್ರಾರಂಭಿಸಲಾಗಿದೆ. ಸೌರಶಕ್ತಿಯು ರೈತರಿಗೆ ಆರ್ಥಿಕ ಮತ್ತು ನೀರಿನ ಭದ್ರತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.