ಹನಿಟ್ರ್ಯಾಪ್ ಜಾಲ ಭೇದಿಸಿದ ಪೊಲೀಸರು; ಇಬ್ಬರು ಮಹಿಳೆಯರು ಸೇರಿ ನಾಲ್ವರ ಬಂಧನ

Ravi Talawar
ಹನಿಟ್ರ್ಯಾಪ್ ಜಾಲ ಭೇದಿಸಿದ ಪೊಲೀಸರು; ಇಬ್ಬರು ಮಹಿಳೆಯರು ಸೇರಿ ನಾಲ್ವರ ಬಂಧನ
WhatsApp Group Join Now
Telegram Group Join Now
ಧಾರವಾಡ: ಇತ್ತೀಚೆಗೆ ರಾಜ್ಯದಲ್ಲಿ ಎಲ್ಲ ಕಡೆ ಹನಿಟ್ರ್ಯಾಪ್​ನದ್ದೇ ಸುದ್ದಿ. ರಾಜಕಾರಣಿಗಳು, ಅಧಿಕಾರಿಗಳು ಸೇರಿದಂತೆ ಅನೇಕ ಜನ, ಹನಿ ಟ್ರ್ಯಾಪ್ ಬಲೆಗೆ ಬಿದ್ದು ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಧಾರವಾಡದಲ್ಲಿಯೂ ಇಂಥದ್ದೊಂದು ಪ್ರಕರಣ ನಡೆದಿದ್ದು, ಇದರಲ್ಲಿ ಕೃಷಿಕನೊಬ್ಬ ಬಲಿ ಪಶುವಾಗಿದ್ದಾನೆ. ಈ ಕುರಿತು ತನಿಖೆ ನಡೆಸಿದ ಪೊಲೀಸರು, ಹನಿಟ್ರ್ಯಾಪ್​ ಟೀಮ್​ನ ನಾಲ್ವರನ್ನು ಬಂಧಿಸಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.
ಧಾರವಾಡದಲ್ಲಿ ಹನಿಟ್ರ್ಯಾಪ್ ಬಲೆಗೆ ಬಿಳಿಸಿಕೊಂಡು ಹಣ ದೋಚುತ್ತಿದ್ದ ಖತರ್ನಾಕ್​ ಗ್ಯಾಂಗ್​ ನಾಲ್ವರು ಆರೋಪಿಗಳನ್ನು ಧಾರವಾಡದ ವಿದ್ಯಾಗಿರಿ ಠಾಣಾ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಧಾರವಾಡ ನಗರದ ನಿವಾಸಿಗಳಾದ ಆಕಾಶ್ ಉಪ್ಪಾರ, ಅಂಜು ಪರ್ವೀನ್, ರೇಣುಕಾ ಉಪ್ಪಾರ, ಮಲ್ಲಿಕ್ ಜಾನ್ ನದಾಫ ಬಂಧಿತರು. ಇವರಿಂದ ಒಂದು ಸ್ಕೋಡಾ ಕಾರು, 5.5 ಲಕ್ಷ ರೂ. ನಗದು, 85 ಗ್ರಾಂ ತೂಕದ 6.63 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ಒಟ್ಟು 14.73 ಲಕ್ಷ ಮೌಲ್ಯದ ವಸ್ತುಗಳ ಜೊತೆಗೆ ವಿವಿಧ ಕಂಪನಿಯ 4 ಮೊಬೈಲ್​ಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಖತರ್ನಾಕ್​ ಗ್ಯಾಂಗ್​ನ ಇಬ್ಬರು ಮಹಿಳೆಯರು, ಪುರುಷರನ್ನು ಫೋನ್ ಮೂಲಕ ಸಂಪರ್ಕಿಸಿ, ಅವರೊಂದಿಗೆ ಸಲುಗೆ ಬೆಳೆಸಿಕೊಂಡು ತಮ್ಮ ಬಳಿ ಕರೆಯಿಸಿಕೊಳ್ಳುತ್ತಿದ್ದರು. ಬಳಿಕ ಅವರೊಂದಿಗೆ ಸಂಪರ್ಕ ಬೆಳೆಸಿ, ಖಾಸಗಿ ಕ್ಷಣಗಳನ್ನು ಫೋನ್​ನಲ್ಲಿ ಸೆರೆ ಹಿಡಿದು, ಬಳಿಕ ಬ್ಲ್ಯಾಕ್ ಮೇಲ್ ಮಾಡಲು ಶುರು ಮಾಡುತ್ತಿದ್ದರು. ಇದೇ ರೀತಿ ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಓರ್ವ ಕೃಷಿಕನೊಂದಿಗೆ ಆರೋಪಿಗಳಾದ ಗಜಲ್​ ಬಾನು ಹಾಗೂ ರೇಣುಕಾ ಉಪ್ಪಾರ್, ಫೋನ್ ಮೂಲಕ ಸಂಪರ್ಕ ಸಾಧಿಸಿದ್ದಾರೆ. ಆತನನ್ನು ಧಾರವಾಡಕ್ಕೆ ಕರೆಯಿಸಿಕೊಂಡು ಖಾಸಗಿ ಕ್ಷಣಗಳನ್ನು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಇವರಿಬ್ಬರೊಂದಿಗೆ ಮಲಿಕ್​ಜಾನ್ ಹಾಗೂ ಆಕಾಶ ಉಪ್ಪಾರ್ ಕೂಡ ಸೇರಿಕೊಂಡು ಆತನ ಬಳಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದಾರೆ.
ಇದರಿಂದ ನೊಂದ ರೈತ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾನೆ. ಆಗ ತನ್ನ ಪೊಲೀಸ್​ ಮಿತ್ರನಿಗೆ ನಡೆದಿರುವ ವಿಷಯವನ್ನು ತಿಳಿಸಿದ್ದಾನೆ. ಅವರು ಕೂಡಲೇ ಧಾರವಾಡದ ವಿದ್ಯಾಗಿರಿ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಕೇಸ್ ದಾಖಲಿಸಿಕೊಂಡು ಕಾರ್ಯಾಚರಣೆ ಶುರು ಮಾಡಿದ್ದಾರೆ. ಅಷ್ಟೊತ್ತಿಗಾಗಲೇ ಸುಮಾರು 50 ಲಕ್ಷಕ್ಕೂ ಹೆಚ್ಚು ಹಣವನ್ನು ಈ ಖತರ್ನಾಕ್ ಟೀಮ್​ ವಸೂಲಿ ಮಾಡಿತ್ತು. ಅಲ್ಲದೇ ಅದೇ ಹಣದಲ್ಲಿ ಸ್ಕೋಡಾ ಖರೀದಿ ಮಾಡಿ, ಸಾಕಷ್ಟು ಕಡೆಗಳಲ್ಲಿ ಸುತ್ತಾಡಿತ್ತು. ಇದೀಗ ನಾಲ್ವರನ್ನೂ ಬಂಧಿಸಿರುವ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಒಟ್ಟಿನಲ್ಲಿ ಕ್ಷಣಕಾಲದ ಸುಖಕ್ಕಾಗಿ ದೂರದ ರಾಯಚೂರು ಜಿಲ್ಲೆಯಿಂದ ಧಾರವಾಡಕ್ಕೆ ಬರುತ್ತಿದ್ದ ವ್ಯಕ್ತಿ, ಇದೀಗ ಇವರಿಂದ ಯಾವಾಗ ಮುಕ್ತಿ ಸಿಕ್ಕೀತೋ ಎನ್ನುತ್ತಿದ್ದ. ಕೊನೆಗೂ ಪೊಲೀಸರು ಈ ಪ್ರಕರಣದಲ್ಲಿ ಆತನಿಗೆ ಸಧ್ಯಕ್ಕೆ ರಿಲ್ಯಾಕ್ಸ್ ಕೊಡಿಸಿದ್ದಂತೂ ಸತ್ಯ.
WhatsApp Group Join Now
Telegram Group Join Now
Share This Article