ಬೆಂಗಳೂರು. ಅ.10: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಕೇಳಿ ಬಂದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ವಿಚಾರ ಹೊರಬಿದ್ದಿದೆ.
ಸ್ವತಃ ವಿನಯ್ ಕುಲಕರ್ಣಿ ಅವರು ಮಹಿಳೆ, ಖಾಸಗಿ ಚಾನೆಲ್ ಮುಖ್ಯಸ್ಥನ ವಿರುದ್ಧ ಬ್ಲ್ಯಾಕ್ಮೇಲ್ ಆರೋಪ ಮಾಡಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಎರಡು ಎಫ್ಐಆರ್ ದಾಖಲಿಸಿ ಸಂಜಯನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸದ್ಯ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷಿ ಒದಗಿಸುವಂತೆ ನೋಟಿಸ್ ಕಳಿಸಲಾಗಿದೆ.
ಈವರೆಗೆ ಸಂತ್ರಸ್ತೆ, ಕುಲಕರ್ಣಿಯಿಂದ ಯಾವುದೇ ಸಾಕ್ಷಿ ನೀಡಲಾಗಿಲ್ಲ. ಕರೆ ಮಾಡಿ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡಿದ್ದಾರೆಂದು ವಿನಯ್ ದೂರು ನೀಡಿದ್ದಾರೆ. ಖಾಸಗಿ ಚಾನೆಲ್ ಮುಖ್ಯಸ್ಥನ ವಿರುದ್ಧ ವಿನಯ್ ಕುಲಕರ್ಣಿ ಗಂಭೀರ ಆರೋಪ ಮಾಡಿದ್ದಾರೆ.
ಕರೆ ಬಂದ ಮೊಬೈಲ್ ನಂಬರ್ ಯಾರ ಹೆಸರಲ್ಲಿದೆ ಎಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೇ ಆಡಿಯೋ ಇದ್ದರೆ ಒದಗಿಸುವಂತೆ ಕೇಳಿದ್ದಾರೆ. ಅಧಿಕಾರಿಗಳು, ರಾಜಕೀಯ ಮುಖಂಡರಿಗೆ ಮಹಿಳೆ ಬ್ಲ್ಯಾಕ್ಮೇಲ್ ಮಾಡಿದ್ದಾಗಿ ವಿನಯ್ ಕುಲಕರ್ಣಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಯಾವಾಗಿನಿಂದ ಪರಿಚಯ? ನಿಮಗೆ ಹೇಗೆ ಪರಿಚಯ? ನಿಮ್ಮ ಮೇಲೆ ಅತ್ಯಾಚಾರ ನಡೆದಿದ್ದೆಲ್ಲಿ? ಅದಕ್ಕೆ ಸಂಬಂಧಿಸಿದ ಪೂರಕ ದಾಖಲೆ ಒದಗಿಸುವಂತೆ ಸಂತ್ರಸ್ತ ಮಹಿಳೆಗೂ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ನನ್ನ ವಿರುದ್ಧದ ಷಡ್ಯಂತ್ರ ಇದು. ನಾನು ಆ ಮಹಿಳೆಯನ್ನು ಮುಟ್ಟಿದ್ದರೆ ನನ್ನ ತಾಯಿಯನ್ನು ಮುಟ್ಟಿದ ಹಾಗೆ. ಕೇವಲ ಎರಡು-ಮೂರು ಸಲ ನಡೆದ ವಿಡಿಯೋ ಕಾಲ್ ಸಂಭಾಷಣೆ ಇಟ್ಟುಕೊಂಡು ಹೀಗೆ ಆರೋಪ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದದ್ದು. ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ಬದುಕಿದ್ದೇನೆ. ಇದರಲ್ಲಿ ನನ್ನದೇನೂ ಪಾತ್ರ ಇಲ್ಲ. ನಾನೂ ದೂರು ಕೊಟ್ಟಿದ್ದೇನೆ. ಈ ಬಗ್ಗೆ ತನಿಖೆ ಆಗಲಿ, ಸತ್ಯಾಸತ್ಯತೆ ಹೊರಬರಲಿ ಎಂದು ವಿನಯ್ ಕುಲಕರ್ಣಿಯವರು ತಮ್ಮ ವಿರುದ್ಧ ಕೇಳಿ ಬಂದ ಆರೋಪವನ್ನು ತಳ್ಳಿ ಹಾಕಿದ್ದಾರೆ.