ಮೈಸೂರು: ನಾನು ಸಿಎಂ ರೇಸ್ನಲ್ಲಿ ಇಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆಯೇ ಇಲ್ಲ ಎಂದಮೇಲೆ ಸಿಎಂ ರೇಸ್ನಲ್ಲಿ ಇರಲು ಹೇಗೆ ಸಾಧ್ಯ?. ಸಿದ್ದರಾಮಯ್ಯ ಜೊತೆಗಿದ್ದೇವೆ ಎಂದು ಎಐಸಿಸಿ ಹೇಳಿದೆ. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ರಾಜೀನಾಮೆ ನೀಡುವುದಿಲ್ಲ. ಅದರ ಅಗತ್ಯತೆಯೂ ಈಗಿಲ್ಲ ಎಂದರು.
ಹರಿಯಾಣದಲ್ಲಿ ಕಾಂಗ್ರೆಸ್ ಸೋಲಿಗೆ ಮುಡಾ ಹಗರಣ ಕಾರಣವೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ನಾವು ಹರಿಯಾಣದ ಸೋಲಿನ ಬಗ್ಗೆ ಇನ್ನೂ ಚರ್ಚೆ ಮಾಡಿಲ್ಲ. ಎಐಸಿಸಿ ಈ ಬಗ್ಗೆ ಆತ್ಮಾವಲೋಕನ ಮಾಡುತ್ತದೆ. ಅದಕ್ಕೂ ಮುಂಚೆಯೇ ಹರಿಯಾಣ ಸೋಲಿಗೆ ಮುಡಾ ಹಗರಣ ಕಾರಣ ಎಂದು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು.