ಕೆಲ ದಿನದ ಹಿಂದೆ ಹೃದಯ ಸಮಸ್ಯೆಯಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದ ನಟ ರಜನೀಕಾಂತ್ ನಿನ್ನೆ ತಡರಾತ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆ ಸೇರಿದ್ದಾರೆ. ಐದು ದಿನಗಳ ಹಿಂದೆ ಸೆಪ್ಟೆಂಬರ್ 30 ರಂದು ಎದೆ ನೋವು ಕಾಣಿಸಿಕೊಂಡ ಕಾರಣ ರಜನೀಕಾಂತ್ ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು. ಸೂಕ್ತ ಚಿಕಿತ್ಸೆ ಹಾಗೂ ವಿಶ್ರಾಂತಿಯ ಬಳಿಕ ನಿನ್ನೆ (ಅಕ್ಟೋಬರ್ 03) ರಾತ್ರಿ 11 ಗಂಟೆ ವೇಳೆಗೆ ಸುರಕ್ಷಿತವಾಗಿ ಮನೆ ಸೇರಿದ್ದಾರೆ. ರಜನೀಕಾಂತ್ ಡಿಸ್ಚಾರ್ಜ್ ಆಗಿರುವ ಮಾಹಿತಿಯನ್ನು ಚೆನ್ನೈ ಪೊಲೀಸರು ಹಂಚಿಕೊಂಡಿದ್ದಾರೆ.
ಸೆಪ್ಟೆಂಬರ್ 30 ರಂದು ರಜನೀಕಾಂತ್ ಆಸ್ಪತ್ರೆಗೆ ದಾಖಲಾಗಿದ್ದರು, ಅವರನ್ನು ಪರೀಕ್ಷೆಗೆ ಒಳಪಡಿಸಿದ್ದ ವೈದ್ಯರು, ರಜನೀಕಾಂತ್ರ ಹೃದಯದಲ್ಲಿ ಸಮಸ್ಯೆ ಉಂಟಾಗಿರುವುದನ್ನು ಪತ್ತೆ ಹಚ್ಚಿದ್ದರು. ರಜನೀಕಾಂತ್ರ ಹೃದಯದ ದೊಡ್ಡ ನಾಳದಲ್ಲಿ ಊತ ಬಂದಿತ್ತು, ಅದು ಹೆಚ್ಚಾಗಿ ರಕ್ತನಾಳವೇ ಒಡೆಯುವ ಅಪಾಯವಿತ್ತು, ಹಾಗಾಗಿ ಅಪೋಲೊ ಆಸ್ಪತ್ರೆ ವೈದ್ಯರು ಊದಿಕೊಂಡಿದ್ದ ರಕ್ತನಾಳಕ್ಕೆ ಸ್ಟಂಟ್ ಅಳವಡಿಸಿದ್ದರು. ಈ ಕ್ರಿಯೆಯನ್ನು ಶಸ್ತ್ರಚಿಕಿತ್ಸೆ ಇಲ್ಲದೆಯೇ ವೈದ್ಯರು ಮಾಡಿದ್ದರು.
ಸ್ಟಂಟ್ ಅಳವಡಿಕೆ ಬಳಿಕ ಐಸಿಯುನಲ್ಲಿರಿಸಿ ಅವರ ಹೃದಯದ ಕಾರ್ಯ, ಒಟ್ಟಾರೆ ದೇಹದ ಆರೋಗ್ಯದ ಮೇಲೆ ನಿಗಾವಹಿಸಿದ್ದ ವೈದ್ಯರು, ಅಕ್ಟೋಬರ್ 03 ರ ರಾತ್ರಿ 11 ಗಂಟೆಗೆ ಅವರನ್ನು ಆಸ್ಪತ್ರೆಯಿಂದ ಬೀಳ್ಕೊಟ್ಟಿದ್ದಾರೆ. ಸ್ಟಂಟ್ ಅಳವಡಿಸಿರುವ ಕಾರಣ ಕೆಲವು ದಿನಗಳ ಕಾಲ ರಜನೀಕಾಂತ್ಗೆ ವಿಶ್ರಾಂತಿಯ ಅಗತ್ಯವಿದೆ ಎನ್ನಲಾಗುತ್ತಿದೆ. ರಜನೀಕಾಂತ್ ಪ್ರಸ್ತುತ ‘ಕೂಲಿ’ ಸಿನಿಮಾದಲ್ಲಿ ನಟಿಸುತ್ತಿದ್ದು, ಮತ್ತೆ ಚಿತ್ರೀಕರಣಕ್ಕೆ ಬರಲು ತುಸು ಹೆಚ್ಚು ದಿನಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.