ನೇಸರಗಿ: ಮತ್ತಿಕೊಪ್ಪದ ಐಸಿಎಆರ್-ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆ, ರಾಮದುರ್ಗ ಇವರ ಸಹಯೋಗದಲ್ಲಿ ಸೂರ್ಯಕಾಂತಿ ಬೆಳೆಯ ಕ್ಷೇತ್ರೋತ್ಸವವನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುಳ್ಳೂರ ಗ್ರಾಮದ ಶ್ರೀ ಮಂಜುನಾಥ ವಿ. ಪಟ್ಟಣ ಇವರ ಜಮೀನಿನಲ್ಲಿ ಮುಳ್ಳೂರ ಹಿರೇಮಠದ ಷ. ಬ್ರ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಆಯೋಜಿಸಿಲಾಗಿತ್ತು.
ಕ್ಷೇತ್ರೋತ್ಸವದ ಉದ್ಘಾಟನೆಯನ್ನು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಶ್ರೀ ಶಿವನಗೌಡ ಎಸ್. ಪಾಟೀಲ ನೆರವೇರಿಸಿದರು. ನಂತರ ಮಾತನಾಡಿದ ಅವರು, ಹಿಂಗಾರು ಹಂಗಾಮು ಪ್ರಾರಂಭವಾಗಿದ್ದು ರೈತರಿಗೆ ಬೇಕಾಗುವ ಬೀಜ ಮತ್ತು ಅಗತ್ಯ ಪರಿಕರಗಳನ್ನು ರೈತರಿಗೆ ಪೂರೈಸಲು ಕೃಷಿ ಇಲಾಖೆಯು ಎಲ್ಲ ಪೂರ್ವ ಸಿದ್ಧತೆ ಮಾಡಿಕೊಂಡಿದೆ. ಯಾವುದೇ ತರಹದ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.
ದೇಶದಲ್ಲಿ ಎಣ್ಣೆಕಾಳು ಬೆಳೆಗಳ ಕ್ಷೇತ್ರವು ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಖಾದ್ಯ ತೈಲದ ಉತ್ಪಾದನೆಯನ್ನು ಅಧಿಕಗೊಳಿಸಲು ರೈತರು ಎಣ್ಣೆಕಾಳು ಬೆಳೆಗಳನ್ನು ಹೆಚ್ಚು ಬೆಳೆಯಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರಾದ ಡಾ. ಮಂಜುನಾಥ ಚೌರಡ್ಡಿ, ದೇಶದಲ್ಲಿ ಆಹಾರ ಬೆಳೆಗಳ ಉತ್ಪನ್ನ ಪ್ರತಿವರ್ಷ ಅಧಿಕವಾಗುತ್ತಿದ್ದು, ಜನಸಂಖ್ಯೆಗೆ ಬೇಕಾದ ಆಹಾರವನ್ನು ಪೂರೈಕೆ ಮಾಡಲು ದೇಶದ ಕೃಷಿ ವ್ಯವಸ್ಥೆಯ ಸಮರ್ಥವಾಗಿದೆ. ಆದಾಗ್ಯೂ ದೇಶದಲ್ಲಿ ಎಣ್ಣೆಕಾಳು ಉತ್ಪಾದನೆಯಲ್ಲಿ ಅಗತ್ಯಕ್ಕಿಂತ ಕಡಿಮೆ ಇರುವ ಕಾರಣ ದೇಶದ ಜನಸಂಖ್ಯೆಗೆ ಬೇಕಾಗುವ ಖಾದ್ಯ ತೈಲವನ್ನು ಪೂರೈಸಲು ೨೦೨೨-೨೩ ರಲ್ಲಿ ನಾವು ಸುಮಾರು ೧.೩೮ ಲಕ್ಷ ಕೋಟಿ ರೂಪಾಯಿ ಮೊತ್ತದ ಖಾದ್ಯತೈಲವನ್ನು ಆಮದು ಮಾಡಿಕೊಂಡಿದ್ದೇವೆ. ಈ ದಿಸೆಯಲ್ಲಿ ನಮ್ಮ ದೇಶದಲ್ಲಿ ಎಣ್ಣೆಕಾಳು ಬೆಳೆಗಳ ಸ್ವಾವಲಂಬನೆ ಮುಖ್ಯವಾಗಿದೆ. ಆದ್ದರಿಂದ ಸೂರ್ಯಕಾಂತಿ ಬೆಳೆಯ ಕ್ಷೇತ್ರವನ್ನು ಹೆಚ್ಚು ಮಾಡುವುದರ ಜೊತೆಗೆ ಉತ್ಪಾದಕತೆಯನ್ನು ಹೆಚ್ಚಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕೃಷಿ ವಿಜ್ಞಾನ ಕೇಂದ್ರವು ಮುಳ್ಳೂರ ಗ್ರಾಮದಲ್ಲಿ ಆಧುನಿಕ ತಾಂತ್ರಿಕತೆಗಳನ್ನು ಅಳವಡಿಸಿ ಉತ್ಪಾದಕತೆಯನ್ನು ಹೆಚ್ಚಿಸುವ ಪ್ರಾತ್ಯಕ್ಷಿಕೆ ಕೈಗೊಂಡು ರೈತರಿಗೆ ತಂತ್ರಜ್ಞಾನದ ಮಾಹಿತಿಯನ್ನು ತಿಳಿಯಪಡಿಸಲಾಗುತ್ತಿದೆ. ಆ ಭಾಗವಾಗಿ ಕ್ಷೇತ್ರೋತ್ಸವ ಕೈಗೊಳ್ಳಲಾಗಿದ್ದು ಸೂರ್ಯಕಾಂತಿ ಬೆಳೆಯುವ ರೈತರು ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳಗಾವಿ ಜಿಲ್ಲೆಯ ಉಪ ಕೃಷಿ ನಿರ್ದೇಶಕ ಶ್ರೀ ಎಸ್. ಬಿ. ಕೊಂಗವಾಡ, ಮಾತನಾಡಿ, ಕೃಷಿ ಇಲಾಖೆ ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಸಹಕಾರದಿಂದ ರೈತರಿಗೆ ತಂತ್ರಜ್ಞಾನದ ಮಾಹಿತಿಯನ್ನು ಯಶಸ್ವಿಯಾಗಿ ನೀಡಲಾಗುತ್ತಿದೆ. ರೈತರು ಕೃಷಿ ಇಲಾಖೆಯ ಸೌಲಭ್ಯಗಳನ್ನು ಬಳಸಿಕೊಂಡು ಎಣ್ಣೆಕಾಳು ಉತ್ಪಾದನೆಯನ್ನು ಅಧಿಕಗೊಳಿಸಬೇಕೆಂದು ಸಲಹೆ ನೀಡಿದರು.
ಕೇಂದ್ರದ ವಿಜ್ಞಾನಿ, ಶ್ರೀ ಜಿ. ಬಿ. ವಿಶ್ವನಾಥ ಪ್ರಾಸ್ತಾವಿಕವಾಗಿ ಮಾತನಾಡಿ ದೇಶದಲ್ಲಿ ಎಣ್ಣೆಕಾಳು ಉತ್ಪಾದನೆಯನ್ನು ಅಧಿಕಗೊಳಿಸಲು ಕೇಂದ್ರ ಸರ್ಕಾರವು ಆದ್ಯತೆ ನೀಡುತ್ತಿದ್ದು, ಈ ಗುರಿ ಸಾಧನೆ ಉದ್ಧೇಶದಿಂದ ಕೃಷಿ ವಿಜ್ಞಾನ ಕೇಂದ್ರವು ಎಣ್ಣೆಕಾಳು ಮಾದರಿ ಗ್ರಾಮ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯ ಭಾಗವಾಗಿ ೨೫೦ ಎಕರೆ ಕ್ಷೇತ್ರದಲ್ಲಿ ಸೂರ್ಯಕಾಂತಿ ಬೆಳೆಯ ಮುಂಚೂಣಿ ಪ್ರಾತ್ಯಕ್ಷಿಕೆಯನ್ನು ತೆಗೆದುಕೊಂಡಿದೆ. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಎಸ್. ಎಸ್. ಹಿರೇಮಠ ಅವರ ನೇತೃತ್ವದಲ್ಲಿ ಪ್ರಾತ್ಯಕ್ಷಿಕೆಗಳನ್ನು ಗ್ರಾಮದಲ್ಲಿ ಯಶಸ್ವಿಯಾಗಿ ಕೈಗೊಳ್ಳಲಾಗಿದೆ. ಮುಳ್ಳೂರು ಹಾಗೂ ಸುತ್ತಮುತ್ತಲಿನ ಭಾಗದ ರೈತರಿಗೆ ಈ ತಂತ್ರಜ್ಞಾನದ ಮಾಹಿತಿ ತಲುಪಿಸಲು ಕ್ಷೇತ್ರೋತ್ಸವವನ್ನು ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಳ್ಳೂರ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಶೋಭಾ ಮಹಾಂತೇಶ ನವಲಗುಂದ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಶ್ರೀ ರೇಣಪ್ಪ ಸೋಮಗೊಂಡ, ಮುಳ್ಳೂರು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಹಾಂತೇಶ ದಾಸಪ್ಪನವರ, ಮಂಜುನಾಥ ವಿ. ಪಟ್ಟಣ, ರಾಮದುರ್ಗ ಸಹಾಯಕ ಕೃಷಿ ನಿರ್ದೇಶಕ ಶ್ರೀ ಎಸ್. ಎಫ್. ಬೆಳವಟಿಗಿ, ಕೃಷಿ ಅಧಿಕಾರಿ ಶ್ರೀ ನವೀನ ಪಾಟೀಲ ಹಾಗೂ ಕೃಷಿ ಸಾವಿತ್ರಿ ಕೆಂಚರಡ್ಡಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು ೧೦೦ ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.