ಆನೇಕಲ್ , ಸೆಪ್ಟೆಂಬರ್ 30: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ವಾಸವಿದ್ದ ಪಾಕಿಸ್ತಾನ ಪ್ರಜೆಯನ್ನು ಪೊಲೀಸರು ಬಂಧಿಸಿದ್ದಾರೆ. ಧರ್ಮದ ವಿಚಾರಕ್ಕೆ ಪಾಕಿಸ್ತಾನದಲ್ಲಿ ಭಿನ್ನಾಭಿಪ್ರಾಯ ಉಂಟಾದ ಸಂದರ್ಭದಲ್ಲಿ ಬಂಧಿತನು ಪಾಕಿಸ್ತಾನ ತೊರೆದು ಬಾಂಗ್ಲಾದೇಶದ ಢಾಕಾದಲ್ಲಿ ನೆಲಸಿದ್ದನು.
ಈತನ ಚಲನವಲನದ ಮೇಲೆ ಕಣ್ಣಿಟ್ಟಿದ್ದ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು, ಪಾಕಿಸ್ತಾನ ಪ್ರಜೆ ಜಿಗಣಿಯಲ್ಲಿ ವಾಸವಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗುಪ್ತಚರ ಇಲಾಖೆ ಅಧಿಕಾರಿಗಳ ಮಾಹಿತಿ ಆಧರಿಸಿ, ಜಿಗಣಿ ಪೊಲೀಸರು ತಡರಾತ್ರಿ ಕಾರ್ಯಾಚರಣೆ ನಡೆಸಿದರು. ಈ ವೇಳೆ ಕುಟುಂಬ ಸಮೇತ ಪಾಕಿಸ್ತಾನ ಪ್ರಜೆಯನ್ನು ಬಂಧಿಸಿದ್ದಾರೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.