ನವದೆಹಲಿ, ಸೆಪ್ಟೆಂಬರ್ 27: ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಸರ್ಕಾರ ಹೆಚ್ಚಿಸಿದೆ. ಕುಶಲತೆಯ ಅವಶ್ಯಕತೆ ಇಲ್ಲದ ಕೆಲಸಗಳನ್ನು ಮಾಡುವವರಿಗೆ ಕನಿಷ್ಠ ವೇತನ 783 ರೂಗೆ ಏರಿಸಲಾಗಿದೆ.
ವಾರಕ್ಕೆ ಒಂದು ರಜೆಯಂತೆ ಪರಿಗಣಿಸಿದರೆ ತಿಂಗಳಿಗೆ ಕನಿಷ್ಠ ವೇತನ 20,358 ರೂ ಆಗುತ್ತದೆ. ಅರೆ ಕೌಶಲ್ಯದ ಕಾರ್ಮಿಕರಿಗೆ ಕನಿಷ್ಠ ದಿನಗೂಲಿ 868 ರೂಗೆ ಏರಿಕೆ ಮಾಡಲಾಗಿದೆ. ಉನ್ನತ ಕೌಶಲ್ಯದ ಕಾರ್ಮಿಕರಿಗೆ ದಿನಗೂಲಿಯನ್ನು 1,035 ರೂಗೆ ಹೆಚ್ಚಿಸಲಾಗಿದೆ. ಒಟ್ಟಾರೆ ಕನಿಷ್ಠ ದಿನಗೂಲಿ ಮಾಸಿಕವಾಗಿ 20,358 ರೂನಿಂದ 26,910 ರೂವರೆಗೂ ಇರಲಿದೆ. ಅಕ್ಟೋಬರ್ 1ರಿಂದ ಇದು ಜಾರಿಯಾಗಲಿದೆ. ಇದು ಎ ಗ್ರೇಡ್ ಪ್ರದೇಶಗಳಲ್ಲಿ ಕೆಲಸ ಮಾಡುವವರಿಗೆ ಮಾಡಲಾಗಿರುವ ದರ ಪರಿಷ್ಕರಣೆ.
ಆರು ತಿಂಗಳ ಗ್ರಾಹಕ ಬೆಲೆ ಅನುಸೂಚಿಯಲ್ಲಿ (ಹಣದುಬ್ಬರ) ಶೇ. 2.40ರಷ್ಟು ಏರಿಕೆ ಆಗಿದೆ. ಈ ಬೆಲೆ ಏರಿಕೆಯಿಂದ ಜೀವನ ವೆಚ್ಚವೂ ಹೆಚ್ಚಾಗಿದೆ. ಇದನ್ನು ಸರಿದೂಗಿಸಲು ಕಾರ್ಮಿಕರಿಗೆ ವೇರಿಯಬಲ್ ಡಿಎ ಅನ್ನು ಹೆಚ್ಚಿಸಲಾಗಿದೆ.