ಬೆಂಗಳೂರು:ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಕೊಡಬೇಕು ಎನ್ನುವುದು ಮೂರು ದಶಕಗಳ ಹೋರಾಟ. ಈ ಹೋರಾಟಕ್ಕೆ ಮನ್ನಣೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವ ಆದೇಶವನ್ನು ಹೊರಡಿಸಿದ್ದು, ಅದಕ್ಕಾಗಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘವು ಅಭಿನಂದಿಸುತ್ತದೆ.
ದಾವಣಗೆರೆಯಲ್ಲಿ ನಡೆದ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ)ದ ಹಕ್ಕೋತ್ತಾಯ ಪರಿಗಣಿಸಿ, ಬಜೆಟ್ನಲ್ಲಿಯೇ ಉಚಿತ ಬಸ್ ಪಾಸ್ ೋಷಣೆ ಮಾಡುವುದಾಗಿ ಭರವಸೆ ನೀಡಿದ್ದರು. ಅಂತೆಯೇ ಬಜೆಟ್ನಲ್ಲಿಯೂ ೋಷಣೆ ಮಾಡಿದ್ದರು. ಈಗ ಉಚಿತ ಬಸ್ ಪಾಸ್ ಸೌಲಭ್ಯ ನನಸಾಗುವಂತೆ ಮಾಡಿರುವುದು ಶ್ಲಾಘನೀಯ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರತಿಕ್ರಿಯಿಸಿದ್ದಾರೆ.
ಉಚಿತ ಬಸ್ ಪಾಸ್ಗೆ 15.66 ಕೋಟಿ ರೂ ಹಣವನ್ನು ಮೀಸಲಿರಿಸಿ ಯೋಜನೆಗೆ ಅನುಮತಿ ಪಡೆಯಲು ವಾರ್ತಾ ಇಲಾಖೆ ಮತ್ತು ಹಣಕಾಸು ಇಲಾಖೆಯಲ್ಲಿ ನಿರಂತರವಾಗಿ ಕೆಯುಡಬ್ಲೂಜೆ ಮಾಡಿದ ಹೋರಾಟದ ಲವಾಗಿ ಯೋಜನೆ ಸಕಾರಗೊಳ್ಳಲು ಸಾಧ್ಯವಾಗಿದೆ. ಇದಕ್ಕೆ ಸಹಕಾರ ನೀಡಿದ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರ ಪ್ರಯತ್ನವೂ ಮಹತ್ವದ್ದು ಎಂದು ತಗಡೂರು ತಿಳಿಸಿದ್ದಾರೆ.
ನುಡಿದಂತೆ ನಡೆದು, ಉಚಿತ ಬಸ್ ಪಾಸ್ ಜಾರಿಗೆ ಬರಲು ಕಾರಣರಾದ ಸಿಎಂ ಸಿದ್ದರಾಮಯ್ಯ, ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡಿದ ಸಿಎಂ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ವಾರ್ತಾ ಇಲಾಖೆ ಆಯುಕ್ತರಾದ ಹೇಮಂತ ನಿಂಬಾಳ್ಕರ್ ಸೇರಿದಂತೆ ಸಹಕಾರ ಕೊಟ್ಟ ಎಲ್ಲರಿಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೃತಜ್ಞತೆಗಳು ಸಲ್ಲುತ್ತವೆ ಎಂದು ಅವರು ತಿಳಿಸಿದ್ದಾರೆ.
ಸರಳೀಕರಣ ಅಗತ್ಯ:
ಯೋಜನೆ ಮೊದಲು ರೂಪುಗೊಂಡು ಜಾರಿಗೆ ಬರಲಿ ಎನ್ನುವುದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮೊದಲ ಆದ್ಯತೆ ಆಗಿತ್ತು. ನಿಯಮಾವಳಿಗಳಲ್ಲಿ ಒಂದಿಷ್ಟು ಕಠಿಣ ಷರತ್ತುಗಳಿರುವುದು ಗಮನಕ್ಕೆ ಬಂದಿದೆ. ಕಾರ್ಯ ನಿರತ ಪತ್ರಕರ್ತರಿಗೆ ಎಲ್ಲರಿಗೂ ಉಚಿತ ಬಸ್ ಪಾಸ್ ಸಿಗಬೇಕು ಎನ್ನುವ ನಿಟ್ಟಿನಲ್ಲಿ ನಿಯಮಾವಳಿ ಸರಳೀಕರಣಕ್ಕೆ ಸಂಘವು ಸರ್ಕಾರದ ಗಮನಕ್ಕೆ ತಂದು ಸರಿಪಡಿಸಲು ಕ್ರಮ ಕೈಗೊಳ್ಳಲಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.