ಬೆಂಗಳೂರು, ಸೆ.25: ಅಧಿಸೂಚನೆಯಾಗಿ ಭರ್ತಿ ಆಗದೆ ಉಳಿದಿರುವ ಹುದ್ದೆಗಳೂ ಸೇರಿದಂತೆ ಎಲ್ಲ ಸರ್ಕಾರಿ ಹುದ್ದೆಗಳ ನೇಮಕಾತಿಗೆ ನಡೆಯುವ ಆಯ್ಕೆಯಲ್ಲಿ ದಿ.01.02.2023ರ ಸುತ್ತೋಲೆಯನ್ನೇ ಅನುಸರಿಸಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿಂದು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ವಿವಿಧ ಇಲಾಖೆಗಳಲ್ಲಿನ ನೇಮಕಾತಿ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದಾಗ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳ ನೇಮಕಾತಿಗಾಗಿ 371 ಜೆ ಅನ್ವಯ ದಿ. 16.11.2016ರಂದು ಹೊರಡಿಸಿದ್ದ ಸುತ್ತೋಲೆ ಸಮರ್ಪಕವಾಗಿತ್ತು ಎಂದರು.
ಈ ಸುತ್ತೋಲೆಯಡಿ ಮೇರಿಟ್ ಆಯ್ಕೆ ಪಟ್ಟಿ ತಯಾರಿಸುವಾಗ ಮೊದಲಿಗೆ ಮಿಕ್ಕುಳಿದ ವೃಂದದಲ್ಲಿ ಲಭ್ಯವಿರುವ ಹುದ್ದೆಗಳನ್ನು ಪರಿಗಣಿಸಿ ತದನಂತರ ಸ್ಥಳೀಯ ವೃಂದದಲ್ಲಿ ಲಭ್ಯವಿರುವ ಹುದ್ದೆಗಳಿಗೆ ಎದುರಾಗಿ ಅರ್ಹ ಸ್ಥಳೀಯ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಮಾಡಲಾಗುತ್ತಿತ್ತು ಎಂದು ವಿವರಿಸಿದರು.
ಆದರೆ ಈ ಹಿಂದಿನ ಬಿಜೆಪಿ ಸರ್ಕಾರ ಹೊರಡಿಸಿದ ದಿ.6.6.2020ರ ಸುತ್ತೋಲೆ ಇದಕ್ಕೆ ತದ್ವಿರುದ್ಧವಾಗಿದ್ದು, ಕಲ್ಯಾಣ ಕರ್ನಾಟಕದ ನೂರಾರು ಯುವಕರ ಭವಿಷ್ಯವನ್ನೇ ನಾಶ ಮಾಡಿತ್ತು, ಜೊತೆಗೆ ಸಂವಿಧಾನ 371 (ಜೆ) ತಿದ್ದುಪಡಿಯ ಮೂಲ ಉದ್ದೇಶವೇ ಈಡೇರದಂತೆ ಆಗಿತ್ತು, ನಂತರ ನಮ್ಮ ಭಾಗದ ಜನಪ್ರತಿನಿಧಿಗಳ ಹೋರಾಟದ ಫಲವಾಗಿ ದಿ01.02.2023ರಂದು ಹೊಸ ಸುತ್ತೋಲೆ ಹೊರಡಿಸಲಾಗಿದ್ದು ಇದು ಸೂಕ್ತವಾಗಿದೆ ಎಂದು ಹೇಳಿದರು.
371 ಜೆ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಹೊರಗೆ ಕೂಡ ಶೇ.8ರಷ್ಟು ಮೀಸಲನ್ನು ಒದಗಿಸಬೇಕಾಗುತ್ತದೆ. ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಭರ್ತಿಯಾಗದ ಖಾಲಿ ಹುದ್ದೆ ಇದ್ದು, ಒಟ್ಟಾರೆ ಕಲ್ಯಾಣ ಕರ್ನಾಟಕದ 41 ವಿಧಾನಸಭಾ ಕ್ಷೇತ್ರಗಳ ಯುವಕರಿಗೆ ಹೆಚ್ಚು ಹುದ್ದೆಗಳು ಲಭಿಸಲಿದೆ ಎಂದರು.