ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದಂತೆ ನಾವು ಸಭೆ, ಸಮಾರಂಭಗಳಲ್ಲಿ ಪ್ಲಾಸ್ಟಿಕ್, ಪೆಟ್ ಬಾಟಲ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೇವೆ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಇಂದು ದೆಹಲಿಯಲ್ಲಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಆಡಳಿತ ಮಂಡಳಿಯ 8ನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ಲಾಸ್ಟಿಕ್ ಮತ್ತು ಪೆಟ್ ಬಾಟಲಿಗಳಲ್ಲಿನ ಆಹಾರ ಪದಾರ್ಥ ಸೇವನೆಯಿಂದ ಮೈಕ್ರೋ ಲೆವೆಲ್ ಪ್ಲಾಸ್ಟಿಕ್ ಹಂತ-ಹಂತವಾಗಿ ಸಣ್ಣ ಪ್ರಮಾಣದಲ್ಲಿ ನಮ್ಮ ದೇಹವನ್ನು ಸೇರುತ್ತಿದೆ. ಇದು ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ಫೈಬರ್ ಅಂಶವಿರುವ ಮತ್ತು ಪ್ಲಾಸ್ಟಿಕ್ನಂತಹ ಪ್ಯಾಕೆಟ್ಗಳಲ್ಲಿನ ಆಹಾರ ಸೇವನೆಯಿಂದ ಇಂದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದರು.
ಇಂದು ಬಹುತೇಕ ಜಂಕ್ ಫುಡ್ಗಳನ್ನೆಲ್ಲ ಪ್ಲಾಸ್ಟಿಕ್ ಪ್ಯಾಕೆಟ್ ಗಳಲ್ಲೇ ಹಾಕಿ ನೀಡಲಾಗುತ್ತದೆ. ಇದನ್ನು ಮನಗಂಡು ಪ್ರಧಾನಿ ನರೇಂದ್ರ ಮೋದಿ ಅವರು ಸಭೆ, ಸಮಾರಂಭಗಳಲ್ಲಿ ಇಂಥ ಪ್ಲಾಸ್ಟಿಕ್, ಪೆಟ್ ಬಾಟಲ್ ಬಳಕೆ ನಿಲ್ಲಿಸಲು ನಿರ್ದೇಶಿಸಿದ್ದಾರೆ ಎಂದು ಹೇಳಿದರು.