ಬೆಂಗಳೂರು, ಸೆ.19: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಎರಡನೇ ಸುತ್ತಿನ ಯುಜಿ ನೀಟ್ 2024 (UG NEET) ಅಖಿಲ ಭಾರತ ಸೀಟು ಹಂಚಿಕೆ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಎರಡನೇ ಸುತ್ತಿನ ಕೌನ್ಸೆಲಿಂಗ್ ಪ್ರಕ್ರಿಯೆಗೆ ತಮ್ಮನ್ನು ನೋಂದಾಯಿಸಿಕೊಂಡ ಅಭ್ಯರ್ಥಿಗಳು ಈಗ ಅಧಿಕೃತ ವೆಬ್‌ಸೈಟ್‌ನಲ್ಲಿ ಕರ್ನಾಟಕ NEET ಸೀಟು ಹಂಚಿಕೆ ಫಲಿತಾಂಶ 2024 ಅನ್ನು ಪರಿಶೀಲಿಸಬಹುದು ಮತ್ತು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. kea.kar.nic.in ನಲ್ಲಿ ನೀಡಲಾದ ಸರಳ ಹಂತಗಳನ್ನು ಅನುಸರಿಸುವ ಮೂಲಕ ಅಥವಾ ಕೆಳಗೆ ನೀಡಲಾದ ನೇರ ಲಿಂಕ್ ಮೂಲಕ ಸೀಟು ಹಂಚಿಕೆ ಫಲಿತಾಂಶವನ್ನು ನೋಡಬಹುದಾಗಿದೆ.
ಯುಜಿ ನೀಟ್ 2024; 2ನೇ ಸುತ್ತಿನ ಸೀಟು ತಾತ್ಕಾಲಿಕ ಪಟ್ಟಿ ಪ್ರಕಟ
ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್ಗಳ ಪ್ರವೇಶದ 2ನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಈ ಸುತ್ತಿನ ಸೀಟು ಹಂಚಿಕೆಗೆ ಸೆ.13ರ ಮಧ್ಯಾಹ್ನ 2 ಗಂಟೆವರೆಗೆ ನಮೂದಿಸಿದ ಆಪ್ಷನ್ಗಳನ್ನು ಪರಿಗಣಿಸಲಾಗಿದೆ. ಇದು ತಾತ್ಕಾಲಿಕ ಫಲಿತಾಂಶವಾಗಿರುವ ಕಾರಣ ಅಭ್ಯರ್ಥಿಗಳು ಕಾಲೇಜುಗಳಿಗೆ ಹೋಗಿ ಪ್ರವೇಶ ಪಡೆಯುವಂತಿಲ್ಲ. ಯಾವುದಾದರೂ ನಿರ್ದಿಷ್ಟ ಆಕ್ಷೇಪಣೆಗಳಿದ್ದಲ್ಲಿ ಸೆ.19ರ ಬೆಳಗ್ಗೆ 10 ಗಂಟೆಯೊಳಗೆ ಕೆಇಎಗೆ ಇ-ಮೇಲ್ ಮೂಲಕ ಸಲ್ಲಿಸಬಹುದು. ಆಕ್ಷೇಪಣೆ ಪರಿಶೀಲಿಸಿದ ಅನಂತರ ಅಂತಿಮ ಫಲಿತಾಂಶ ಪ್ರಕಟಿಸಲಾಗುವುದು.