ಬೆಂಗಳೂರು, : ಮೊನ್ನೆ ಅಷ್ಟೇ ಉದ್ಘಾಟನೆಗೊಂಡಿರುವ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಗೆ ಕೇಂದ್ರ ಸರ್ಕಾರ ತಕರಾರು ಎತ್ತಿದೆ. ಎತ್ತಿನಹೊಳೆ ಯೋಜನೆಯಿಂದ ಪಶ್ಚಿಮ ಘಟ್ಟಕ್ಕೆ ಹಾನಿಯಾದ ಬಗ್ಗೆ ವರದಿ ಹಿನ್ನೆಲೆಯಲ್ಲಿ ಯೋಜನೆಯ ಕಾರ್ಯ ಸಾಧ್ಯತೆ ವರದಿ ಸಲ್ಲಿಸುವಂತೆ ಕೇಂದ್ರ ಅರಣ್ಯ, ಪರಿಸರ ಮತ್ತು ತಾಪಮಾನ ಸಚಿವಾಲಯ, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಂಚಿಗಾನಹಳ್ಳಿಯ ಸರ್ವೆ ಸಂಖ್ಯೆ 2, 30 ಹಾಗೂ ಯಲ್ಲಾಪುರ ಗ್ರಾಮದ ಸರ್ವೆ ಸಂಖ್ಯೆ 34, 35 ಮತ್ತು 36ರ ಅರಣ್ಯ ಬಳಕೆ ಬಗ್ಗೆ ವರದಿ ನೀಡಿವಂತೆ ನೋಟಿಸ್ನಲ್ಲಿ ತಾಕೀತು ಮಾಡಿದೆ.
ಪರ-ವಿರೋಧಗಳ ಮಧ್ಯ ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆಯ ಮೊದಲ ಹಂತಕ್ಕೆ ಸಿಎಂ ಸಿದ್ದರಾಮಯ್ಯ ಶುಕ್ರವಾರ ಚಾಲನೆ ನೀಡಿದ್ದರು. ಸಕಲೇಶಪುರ ತಾಲ್ಲೂಕಿನ ದೊಡ್ಡನಾಗರ ಬಳಿ ಯೋಜನೆ ಉದ್ಘಾಟನೆ ಮಾಡಲಾಗಿತ್ತು. ಟೇಪ್ ಕತ್ತರಿಸುವ ಮೂಲಕ ಉದ್ಘಾಟನೆ ನೆರವೇರಿಸಿದ ಸಿಎಂ, ದೊಡ್ಡನಾಗರದ 9ನೇ ಪಂಪ್ ಹೌಸ್ನಲ್ಲಿ ಕಂಪ್ಯೂಟರ್ ಮೂಲಕ ಮೋಟರ್ ಆನ್ ಮಾಡಿದ್ದರು. ಇನ್ನು ಉದ್ಘಾಟನೆಗೂ ಒಂದು ದಿನ ಮೊದಲೇ ಅಂದರೆ ಸೆ. 05ರಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಸ್ಥಳಕ್ಕೆ ಹೋಗಿ ಪೂಜೆ- ಹೋಮ ಹವನಗಳನ್ನು ಮಾಡಿದ್ದರು.