ಬೆಂಗಳೂರು: ಸಿನಿರಂಗದಲ್ಲಿ ‘ಕಾಸ್ಟಿಂಗ್ ಕೌಚ್’ ಸಮಸ್ಯೆಯಿದೆ ಎಂಬ ಆರೋಪವನ್ನು ಈಗಾಗಲೇ ಸಾಕಷ್ಟು ನಟಿಮಣಿಯರು ಮಾಡಿದ್ದಾರೆ. ಇತ್ತೀಚೆಗಷ್ಟೇ ಮಲಯಾಳಂ ಚಿತ್ರರಂಗದ ಕರಾಳ ಮುಖವನ್ನು ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ ಬಯಲಿಗೆಳೆದಿದೆ. ಅಂದಿನಿಂದ ಮಲಯಾಳಂ ಚಿತ್ರರಂಗದ ದಿಗ್ಗಜರ ಹೆಸರುಗಳು ಕೇಳಿಬಂದ ಬಳಿಕ ಸಾಕಷ್ಟು ಸದ್ದು ಮಾಡಿದೆ. ಮಾಲಿವುಡ್ ನಟ ನಿರ್ದೇಶಕರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿರುವುದರಲ್ಲದೆ ಪ್ರಕರಣಗಳೂ ದಾಖಲಾಗಿವೆ. ಇದೀಗ ಅದೇ ರೀತಿಯ ಸಮಿತಿ ರಚನೆಯಾಗಬೇಕೆಂಬ ಕೂಗು ಎಲ್ಲ ಚಿತ್ರರಂಗಗಳಲ್ಲೂ ಕೇಳಿಬರುತ್ತಿದೆ. ಕನ್ನಡ ಚಿತ್ರರಂಗದಿಂದಲೂ ಅದೇ ರೀತಿಯ ಒತ್ತಾಯ ಬಂದಿದೆ.
ಹೌದು, ಕೆಲ ವರ್ಷಗಳ ಹಿಂದೆ ”ಮಿ ಟೂ” ಪ್ರಕರಣ ಸ್ಯಾಂಡಲ್ವುಡ್ನ ನಿದ್ದೆಗೆಡಿಸಿತ್ತು. ಚಿತ್ರರಂಗದಲ್ಲಿ ಕೆಲಸ ಮಾಡುವ ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕಾಗಿ ಈ ಹಿಂದೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (FIRE) ರಚನೆ ಮಾಡಲಾಗಿತ್ತು. ಇದರಲ್ಲಿ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ, ನಿರ್ದೇಶಕರಾದ ಕವಿತಾ ಲಂಕೇಶ್, ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಸಾಕಷ್ಟು ನಟಿಯರು ಸದಸ್ಯರಾಗಿದ್ದರು. ಇದೀಗ ಫೈರ್ ಕಮಿಟಿ ಹಾಗೂ ನಿವೃತ್ತ ನ್ಯಾಯಾಮೂರ್ತಿಗಳ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುವಂತೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (ಫೈರ್) ಕರ್ನಾಟಕ ಸರ್ಕಾರಕ್ಕೆ ಒತ್ತಾಯಿಸಿದೆ.