ಬೆಂಗಳೂರು, ಸೆಪ್ಟೆಂಬರ್ 04: ರಾಜ್ಯ ಅಕಾಡೆಮಿ ಮತ್ತು ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಪ್ರಾಧಿಕಾರಗಳಿಗೆ ಸದಸ್ಯರ ನೇಮಕದ ವಿಚಾರವಾಗಿ ಕಾಂಗ್ರೆಸ್ ಪಾಳೆಯದಲ್ಲೇ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಸದಸ್ಯರ ನೇಮಕಾತಿಯಲ್ಲಿ ಏಕಪಕ್ಷೀಯ ನಡೆ ಅನುಸರಿಸಲಾಗಿದೆ ಎಂದು ತೀವ್ರ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ದೂರು ನೀಡಲು ರಾಜ್ಯ ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ.
ಪಕ್ಷದ ಎರಡು, ಮೂರನೇ ಹಂತದ ನಾಯಕರು, ಕಾರ್ಯಕರ್ತರಿಗೆ ಅವಕಾಶ ಸಿಗುತ್ತಿಲ್ಲ. ಸಿಂಡಿಕೇಟ್ ಸದಸ್ಯ ಸ್ಥಾನ ಬಹುತೇಕ ಸಾಹಿತಿಗಳು, ಸಾಹಿತಿಗಳ ಸೋಗಿನಲ್ಲಿರುವವರಿಗೆ ಆದ್ಯತೆ ನೀಡಿರುವ ದೂರು ಕೇಳಿಬರುತ್ತಿದೆ. ಸ್ವಪಕ್ಷಿಯರಿಗೆ ಆಯಕಟ್ಟಿನ ಹುದ್ದೆ ನೀಡುತ್ತಿರುವ ಅಥವಾ ವರ್ಗಾವಣೆ ಮಾಡುತ್ತಿರುವ ಬಗ್ಗೆ ಈ ಹಿಂದೆಯೇ ಶಾಸಕ ಶಾಮನೂರು ಶಿವಶಂಕರಪ್ಪ ಬಹಿರಂಗ ಆಕ್ರೋಶ ವ್ಯಕ್ತಪಡಿಸಿದ್ದರು. ಬಹುತೇಕ ನಾಮ ನಿರ್ದೇಶನದಲ್ಲಿ ವೀರಶೈವ ಲಿಂಗಾಯತರು, ಕಡೆಗಣನೆ ಬಗ್ಗೆ ಜನಾಂಗದ ಮುಖಂಡರಲ್ಲಿ ಬೇಗುದಿ ಎದ್ದಿದೆ. ವೀರಶೈವ ಲಿಂಗಾಯತರು, ಒಕ್ಕಲಿಗರನ್ನು ಕಡೆಗಣಿಸಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.