ಕಲಬುರಗಿ , ಸೆಪ್ಟೆಂಬರ್ 04: ಕಲಬುರಗಿ ಜಿಲ್ಲೆಯ 1,000 ಎಕರೆ ಪ್ರದೇಶದಲ್ಲಿ ಪಿ.ಪಿ.ಪಿ ಮಾದರಿಯಲ್ಲಿ ಮೆಗಾ ಜವಳಿ ಪಾರ್ಕ್ನ್ನು ಸ್ಥಾಪಿಸಲಾಗುತ್ತಿದ್ದು ಇದರಿಂದ 1 ಲಕ್ಷ ಜನರಿಗೆ ನೇರ ಉದ್ಯೋಗ ಹಾಗೂ 2 ಲಕ್ಷ ಜನರಿಗೆ ಪರೋಕ್ಷ ಉದ್ಯೋಗ ಸೃಜನೆಯಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಬೆಂಗಳೂರಿನ ವಿಕಾಸೌಧದ ಕಚೇರಿಯಲ್ಲಿ ಸಚಿವರು ನಡೆಸಿದ ಸಭೆಯಲ್ಲಿ ಜವಳಿ ಪಾರ್ಕ್ ಸಜ್ಜುಗೊಳಿಸಲು ಮೂಲಭೂತ ಸೌಲಭ್ಯಗಳನ್ನು ವಿಸ್ತರಿಸುವ ಸಂಬಂಧದಲ್ಲಿ ಚರ್ಚಿಸಲಾಯಿತು. “ಈ ಯೋಜನೆಗೆ ಪೂರಕವಾದ ಮೂಲ ಸೌಕರ್ಯಕ್ಕಾಗಿ 50 ಕೋಟಿ ರೂ. ಅನುದಾನವನ್ನು ಈ ಬಾರಿಯ ಆಯವ್ಯಯದಲ್ಲಿ ಘೋಷಿಸಲಾಗಿದೆ ಎಂದು ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಪಾರ್ಕ್ ಅವಶ್ಯಕತೆಗಳಿಗನುಗುಣವಾಗಿ ಸುಮಾರು 16 ಎಂ.ಎಲ್.ಡಿ ನೀರಿನ ಅವಶ್ಯಕತೆಯಿದ್ದು, ಮದ್ರಿ ಗ್ರಾಮದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿರುವ ಬ್ಯಾರೇಜ್ನಿಂದ ನೀರು ಪೂರೈಕೆ ಮಾಡುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿದ ಪ್ರಿಯಾಂಕ್ ಖರ್ಗೆ ಅವರು ಪಾರ್ಕ್ ಆವರಣದಲ್ಲಿನ ಕೆರೆಯನ್ನು ಪುನರ್ಜೀವಗೊಳಿಸುವುದು, ಮಳೆನೀರು ಕೊಯಲು ಪದ್ಧತಿ ಅಳವಡಿಕೆ ಮೂಲಕ ನೀರನ್ನು ಬಳಸಿಕೊಳ್ಳುವ ಪರ್ಯಾಯ ವ್ಯವಸ್ಥೆಗಳನ್ನೂ ಮಾಡಲು ಸಚಿವರಾದ ಪ್ರಿಯಾಂಕ್ ಖರ್ಗೆ ಸೂಚಿಸಿದರು.