ಬೆಂಗಳೂರು: ಸತೀಶ್ ಜಾರಕಿಹೊಳಿ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಈ ಮೂವರಲ್ಲಿ ಯಾರೇ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದರೂ ಅವರಿಗೆ ನಮ್ಮ ಬೆಂಬಲವಿದೆ ಎಂದು ಶೋಷಿತ ಸಮುದಾಯ ಮಹಾ ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ.ರಾಮಚಂದ್ರಪ್ಪ ಹೇಳಿದರು.
ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಮಚಂದ್ರಪ್ಪ, ಮುಂದೆ ಯಾರು ಮುಖ್ಯಮಂತ್ರಿ ಆಗಲಿದ್ದಾರೆ ಅನ್ನುವುದಕ್ಕಿಂತ ಸದ್ಯಕ್ಕೆ ಸಿದ್ದರಾಮಯ್ಯ ಉತ್ತಮ ಆಡಳಿತ ನೀಡುತ್ತಿದ್ದಾರೆ ಹೀಗಾಗಿ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬಾರದು ಎಂದರು.
ಮುಡಾ ಹಗರಣ ಸಂಬಂಧ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಪ್ರಕ್ರಿಯೆಗೆ ಕಿಡಿಕಾರಿದ ಅವರು, ಸಿದ್ದರಾಮಯ್ಯ ಅವರ ಹೆಸರನ್ನು ಅನಗತ್ಯವಾಗಿ ಸೈಟ್ ಅಕ್ರಮದ ಹೆಸರಲ್ಲಿ ತಳುಕು ಹಾಕಲಾಗುತ್ತಿದೆ. ಅದರೆ ಈ ಹಿಂದೆ ನಡೆದಿರುವ ಅಕ್ರಮ ಸೈಟ್ ಹಂಚಿಕೆ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಇದೆಲ್ಲವೂ ಬಿಜೆಪಿ, ಜೆಡಿಎಸ್ ರಾಜಕೀಯ ಕುತಂತ್ರ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರದ ಕೈಗೊಂಬೆಯಂತೆ ರಾಜ್ಯಪಾಲರು ನಡೆದುಕೊಳ್ಳುತ್ತಿದ್ದಾರೆ ಹೀಗಾಗಿ ಈ ಮುಂದೆ ಗೆಹ್ಲೋಟ್ ಹಾಜರಾರುವ ಎಲ್ಲ ವಿಶ್ವವಿದ್ಯಾಲಯಗಳ ಘಟಿಕೋತ್ಸವದಲ್ಲಿಯೂ ಪ್ರತಿಭಟಿಸಲು ನಿರ್ಧಾರ ತೆಗೆದುಕೊಂಡಿದ್ದೇವೆ ಎಂದರು.
ಒಕ್ಕೂಟದ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ, ಪ್ರತಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ರಾಜ್ಯಪಾಲರನ್ನು ತೊಲಗಿಸಿ, ಕರ್ನಾಟಕವನ್ನು ರಕ್ಷಿಸಿ ಅನ್ನುವ ಘೋಷ ವಾಕ್ಯದೊಂದಿಗೆ ಗೆಹ್ಲೋಟ್ ವಿರುದ್ಧ ರಾಜ್ಯಾದ್ಯಂತ ಕಪ್ಪು ಪಟ್ಟಿ ಪ್ರದರ್ಶಿಸಿ ಪ್ರತಿಭಟಿಸಲು ಶೋಷಿತ ಸಮುದಾಯ ನಿರ್ಧರಿಸಿದೆ ಎಂದರು.
ಒಕ್ಕೂಟದ ಇನ್ನೊಬ್ಬ ಮುಖಂಡ ಅನಂತ ನಾಯ್ಕ್ ಮಾತನಾಡಿ ಸಿದ್ದರಾಮಯ್ಯ ಅವರ ಸುಗಮ ಆಡಳಿತ ಸಹಿಸದ ಬಿಜೆಪಿ ಮತ್ತು ಜೆಡಿಎಸ್ ಅನಗತ್ಯವಾಗಿ ಸಿದ್ದರಾಮಯ್ಯ ಅವರ ಆಡಳಿತ ಶಕ್ತಿಯನ್ನು ಕುಂದಿಸುವ ಕುತಂತ್ರ ನಡೆಸುತ್ತಿದೆ. ಸಂಬಂಧವೇ ಇಲ್ಲದ ಅಕ್ರಮದಲ್ಲಿ ಸಿದ್ದರಾಮಯ್ಯ ಅವರ ಹೆಸರನ್ನು ತಳಕು ಹಾಕಿ ರಾಜಕೀಯ ಜೀವನಕ್ಕೆ ಧಕ್ಕೆ ತರಲು ಬಿಜೆಪಿ ಮತ್ತು ಜೆಡಿಎಸ್ ಕುತಂತ್ರದ ರಾಜಕಾರಣ ನಡೆಸುತ್ತಿದೆ ಎಂದು ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಶೋಷಿತ ಸಮುದಾಯ ಮಹಾ ಒಕ್ಕೂಟದ ಪ್ರಮುಖರು, ಹಾಗೂ ವಿವಿಧ ದಲಿತ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.