ಚಂಡೀಗಢ: ಕೃಷಿ ನೀತಿ ಅನುಷ್ಠಾನಗೊಳಿಸುವಲ್ಲಿ ಎಎಪಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಪಂಜಾಬ್ನ ಭಾರ್ತಿ ಕಿಸಾನ್ ಯುನಿಯೂನ್-ಬಿಕೆಯು (ಉಗ್ರಹನ್) ಮತ್ತು ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಸೇರಿದಂತೆ 37 ರೈತ ಸಂಘಟನೆಯ ಸಾವಿರಾರು ರೈತರು ಧರಣಿ ಆರಂಭಿಸಿದ್ದಾರೆ.
ಸೋಮವಾರದಿಂದ ರಾಜ್ಯದಲ್ಲಿ ಮೂರು ದಿನಗಳ ಮಳೆಗಾಲದ ವಿಧಾನಸಭಾ ಅಧಿವೇಶನ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಬಿಕೆಯು ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದೆ. ಎಸ್ಕೆಎಂನ ರೈತರು ಕೂಡ ಬಿಕೆಯು ಜೊತೆ ಪ್ರತಿಭಟನೆಗೆ ಮುಂದಾಗಿದ್ದಾರೆ.
ಕೃಷಿ ನೀತಿ ಅಳವಡಿಕೆಯ ಜೊತೆಗೆ ಬಿಕೆಯು, ಭೂರಹಿತ ಕಾರ್ಮಿಕರು ಮತ್ತು ರೈತರಿಗೆ ಭೂ ಹಂಚಿಕೆಯಲ್ಲಿ ವಿಳಂಬ ಮತ್ತು ಕೃಷಿ ಮತ್ತು ಕಾರ್ಮಿಕರ ಸಾಲಮನ್ನಾದಂತಹ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸುತ್ತಿದೆ. ಕೃಷಿ ನೀತಿಗೆ ಬೆಂಬಲ ವ್ಯಕ್ತಪಡಿಸಿ, ಡೆಮಾಕ್ರಟಿಕ್ ಟೀಚರ್ಸ್ ಫ್ರಂಟ್ ಹಾಗೂ ಗುತ್ತಿಗೆ ನೌರರ ಸಂಘಗಳು ಕೂಡ ಪ್ರತಿಭಟನಾ ರ್ಯಾಲಿಗೆ ಕೃಷಿ ಸಂಘಟನೆಗಳಿಗೆ ಬೆಂಬಲ ವ್ಯಕ್ತಪಡಿಸಿವೆ.
ಎಸ್ಕೆಎಂ ಕೃಷಿ ನೀತಿ ಜೊತೆಯಲ್ಲಿ ಪಂಜಾಬ್ನಾದ್ಯಂತ ಕಾಲುವೆ ನೀರನ್ನು ಸಮರ್ಪಕವಾಗಿ ವಿತರಣೆ ಮಾಡುವ ಮತ್ತು ವಾಘಾ ಮತ್ತು ಹುಸೇನಿವಾಲಾ ಗಡಿಗಳ ಮೂಲಕ ಪಾಕಿಸ್ತಾನದೊಂದಿಗೆ ವ್ಯಾಪಾರ ಪುನರಾರಂಭಿಸುವ ಬೇಡಿಕೆಗಳನ್ನೂ ಮುಂದಿಟ್ಟಿದೆ.
ರಾಸಾಯನಿಕ ಮುಕ್ತ ಬೆಳೆಗಳ ಉತ್ತೇಜನ, ಆತ್ಮಹತ್ಯೆಗೆ ಶರಣಾದ ಕೃಷಿ ಕುಟುಂಬಕ್ಕೆ ಪರಿಹಾರ ಮತ್ತು ರಾಜ್ಯದಲ್ಲಿರುವ ಮಾದಕ ವಸ್ತು ಸಮಸ್ಯೆ ನಿವಾರಣೆಗಾಗಿ ನಾವು ಬೇಡಿಕೆ ಇಟ್ಟಿದ್ದೇವೆ ಎಂದು ಪಂಜಾಬ್ ಖೇತ್ ಮಜ್ದೂರ್ ಯೂನಿಯನ್ನ ಪ್ರಧಾನ ಕಾರ್ಯದರ್ಶಿ ಲಚ್ಚಮಾನ್ ಸಿಂಗ್ ಸೆವೆವಾಲಾ ತಿಳಿಸಿದ್ದಾರೆ.
ವಿಧಾನಸೌಧದವರೆಗೆ ರೈತರು ಮೆರವಣಿಗೆ ನಡೆಸಿ, ನಮ್ಮ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳು ಮತ್ತು ಪ್ರತಿಪಕ್ಷ ನಾಯಕರಿಗೆ ಮನವಿ ಮಾಡಲಾಗುವುದು ಎಂದು ಬಿಕೆಯು ಪ್ರಧಾನ ಕಾರ್ಯದರ್ಶಿ ಸುಖದೇವ್ ಸಿಂಗ್ ಕೊರಿಕಲನ್ ಹೇಳಿದ್ದಾರೆ.