ಬೆಂಗಳೂರು: ಮುಡಾದಲ್ಲಿ ಅಕ್ರಮ ನಿವೇಶನ ಹಂಚಿಕೆ ಆರೋಪಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡ ಹೈಕೋರ್ಟ್, ಮಧ್ಯಾಹ್ನ 2-30ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ನ್ಯಾಯಾಧೀಶರಾದ ಎಂ. ನಾಗಪ್ರಸನ್ನ ಅವರನ್ನೊಳಗೊಂಡ ನ್ಯಾಯಪೀಠ ಈ ಅರ್ಜಿ ವಿಚಾರಣೆ ನಡೆಸುತ್ತಿದ್ದು, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ರಾಜ್ಯಪಾಲರ ಪರವಾಗಿ ವಾದಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಈಗಾಗಲೇ ವಾದ ಮಂಡಿಸಿರುವ ಸುಪ್ರೀಂಕೋರ್ಟ್ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ರಾಜ್ಯಪಾಲರ ಆದೇಶವನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ.
ರಾಜ್ಯಪಾಲರು ಕಾನೂನು ಪ್ರಕಾರ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡ ತುಷಾರ್ ಮೆಹ್ತಾ, ಸಿಎಂ ಸಿದ್ದರಾಮಯ್ಯ ಅವರಿಗೆ ನೀಡಲಾದ ಶೋಕಾಸ್ ನೋಟಿಸ್ ತಿರಸ್ಕರಿಸಿದ ಸಚಿವ ಸಂಪುಟದ 91 ಪುಟಗಳ ನಿರ್ಣಯವನ್ನು ನ್ಯಾಯಾಲಯದ ಗಮನಕ್ಕೆ ತಂದರು. ಮುಖ್ಯಮಂತ್ರಿ ಅವರನ್ನು ಸಂಪುಟದ ಸಚಿವರೇ ಆಯ್ಕೆ ಮಾಡುವುದರಿಂದ ಸಿಎಂ ವಿರುದ್ಧ ದೂರು ಬಂದಾಗ ರಾಜ್ಯಪಾಲರು ಸಂಪುಟದ ನಿರ್ಧಾರವನ್ನು ಪರಿಗಣಿಸುವುದು ಅನಿವಾರ್ಯವಲ್ಲ ಎಂದು ಮೆಹ್ತಾ ಒತ್ತಿ ಹೇಳಿದರು. ಸಿಎಂ ವಿರುದ್ಧ ಸಂಪುಟ ಸಭೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಕಡಿಮೆ ಎಂದು ಅವರು ತಿಳಿಸಿದರು.