ಭಾರಿ ಮಳೆಗೆ ನಲುಗಿದ ಗುಜರಾತ್​; 28 ಸಾವು, 18,000ಕ್ಕೂ ಹೆಚ್ಚು ಸಂತ್ರಸ್ತರ ಸ್ಥಳಾಂತರ

Ravi Talawar
ಭಾರಿ ಮಳೆಗೆ ನಲುಗಿದ ಗುಜರಾತ್​; 28 ಸಾವು, 18,000ಕ್ಕೂ ಹೆಚ್ಚು ಸಂತ್ರಸ್ತರ ಸ್ಥಳಾಂತರ
WhatsApp Group Join Now
Telegram Group Join Now

ಅಹಮದಾಬಾದ್​ ​: ಕಳೆದ ಮೂರು ದಿನಗಳಿಂದ ಗುಜರಾತ್​ನಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಇದುವರೆಗೆ 28 ಜನರು ಸಾವನ್ನಪ್ಪಿದ್ದಾರೆ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಿಂದ ಸುಮಾರು 18,000 ಜನರನ್ನು ಸುಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ವಾಡಿಕೆಗಿಂತ ಹೆಚ್ಚಿನ ಮಳೆಯಿಂದಾಗಿ ಗುಜರಾತ್​ನ 18 ಜಿಲ್ಲೆಗಳು ಅತೀವ ಹಾನಿಗೊಳಗಾಗಿವೆ. ಕಚ್​, ದ್ವಾರಕಾ, ಜಾಮ್​ನಗರ, ಮೊರ್ಬಿ, ಸುರೇಂದ್ರನಗರ, ಜುನಾಗಢ್​, ರಾಜ್​ಕೋಟ್​, ಬೊಟಾಡ್​, ಗಿರ್​ ಸೋಮನಾಥ್​, ಅಮ್ರೇಲಿ ಮತ್ತು ಭಾವನಗರದಲ್ಲಿ ಹೆಚ್ಚು ಹಾನಿಯಾಗಿದೆ. ಮುಂದಿನ 5 ದಿನಗಳು ಇದೇ ಪರಿಸ್ಥಿತಿ ಮುಂದುವರಿಯಲಿದ್ದು, 5 ದಿನಗಳ ಕಾಲ ಗುಜರಾತ್​ನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಹವಾಮಾನ ಇಲಾಖೆ (ಐಎಂಡಿ) ಗುರುವಾರ ಗುಜರಾತ್​ನ 33 ಜಿಲ್ಲೆಗಳ ಪೈಕಿ 11 ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​ ಹಾಗೂ ಉಳಿದ 22 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​ ಘೋಷಣೆ ಮಾಡಿದೆ. ಈ ಪ್ರದೇಶದಲ್ಲಿ ಆಳವಾದ ವಾಯುಭಾರ ಕುಸಿತದಿಂದಾಗಿ ಭಾರಿ ಮಳೆಯಾಗುತ್ತಿದೆ. ಕಚ್​, ದ್ವಾರಕಾ, ಜಾಮ್‌ನಗರ, ಮೊರ್ಬಿ, ಸುರೇಂದ್ರನಗರ, ಜುನಾಗಢ್, ರಾಜ್‌ಕೋಟ್, ಬೊಟಾಡ್, ಗಿರ್ ಸೋಮನಾಥ್, ಅಮ್ರೇಲಿ ಮತ್ತು ಭಾವನಗರ ಜಿಲ್ಲೆಗಳನ್ನು ಒಳಗೊಂಡಿರುವ ಕಚ್​ ಮತ್ತು ಸೌರಾಷ್ಟ್ರ ಪ್ರದೇಶಗಳಿಗೆ IMD ರೆಡ್ ಅಲರ್ಟ್ ನೀಡಿದೆ. ಉಳಿದಂತೆ, ಉತ್ತರ, ಮಧ್ಯ ಮತ್ತು ದಕ್ಷಿಣ ಗುಜರಾತ್‌ಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಗುಜರಾತ್ ಸರ್ಕಾರವು ಹಂಚಿಕೊಂಡ ವಿವರಗಳ ಪ್ರಕಾರ, ಮೋರ್ಬಿ, ವಡೋದರಾ, ಭರೂಚ್, ಜಾಮ್‌ನಗರ, ಅರಾವಳಿ, ಪಂಚಮಹಲ್, ದ್ವಾರಕಾ ಮತ್ತು ದಂಗ್ ಜಿಲ್ಲೆಗಳಲ್ಲಿ ಕನಿಷ್ಠ ಒಬ್ಬರು ಸಾವನ್ನಪ್ಪಿದ್ದಾರೆ. ಆನಂದ್‌ನಲ್ಲಿ ಆರು ಜನರು, ಅಹಮದಾಬಾದ್‌ನಲ್ಲಿ ನಾಲ್ಕು ಜನರು, ಗಾಂಧಿನಗರ, ಖೇಡಾ, ಮಹಿಸಾಗರ್, ದಾಹೋದ್ ಮತ್ತು ಸುರೇಂದ್ರನಗರ ಜಿಲ್ಲೆಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ಮೃತರ ಪೈಕಿ ಏಳು ಜನರು ಮೋರ್ಬಿ ಜಿಲ್ಲೆಯ ಧವಾನಾ ಗ್ರಾಮದ ಬಳಿ ಉಕ್ಕಿ ಹರಿಯುತ್ತಿದ್ದ ಕಾಸ್‌ವೇ ದಾಟುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು, ಗುಜರಾತ್​ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್​ ಅವರೊಂದಿಗೆ ದೂರವಾಣಿ ಸಂಭಾಷೆ ನಡೆಸಿದ್ದು, ಕೇಂದ್ರ ಸರ್ಕಾರದಿಂದ ಸಾಧ್ಯ ಇರುವ ಎಲ್ಲ ಬೆಂಬಲ ಮತ್ತು ನೆರವಿನ ಭರವಸೆ ನೀಡಿದರು.

 

 

WhatsApp Group Join Now
Telegram Group Join Now
Share This Article